ಸಾಗರ್ : ಮದುವೆ, ಜಾತ್ರೆಗಳಲ್ಲಿ ನೃತ್ಯ ಮಾಡುತ್ತಾ ತನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿದ್ದ ಒಬ್ಬ ತಾಯಿ, ಕೊನೆಗೆ ಮನೆಯಲ್ಲೇ ಹೆಣವಾಗಿ ಪತ್ತೆಯಾದ ಘೋರ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಂಭವಿಸಿದೆ. ಹತ್ತು ದಿನಗಳಿಂದ ನಾಪತ್ತೆಯಾಗಿದ್ದ 45 ವರ್ಷದ ಡ್ಯಾನ್ಸರ್ ಮಮತಾ ಅಹಿರ್ವಾರ್ ಅವರ ಮೃತದೇಹ ಹಾಸಿಗೆಯ ಪೆಟ್ಟಿಗೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಮತಾ ಅವರ ಮಕ್ಕಳು, ದೇವ್ ಮತ್ತು ಮುಸ್ಕಾನ್, ಕಳೆದ ಹತ್ತು ದಿನಗಳಿಂದ ವಿದಿಶಾದಲ್ಲಿರುವ ತಮ್ಮ ಅಕ್ಕನ ಮನೆಯಲ್ಲಿದ್ದರು. ತಾಯಿಯಂತೆ ತಾವೂ ಕಷ್ಟಪಟ್ಟು ದುಡಿದು ಸಂಸಾರಕ್ಕೆ ನೆರವಾಗಲೆಂದು ಉದ್ಯೋಗ ಅರಸುತ್ತಿದ್ದ ಮಕ್ಕಳು, ಏಪ್ರಿಲ್ 5 ರಿಂದ ತಾಯಿಯೊಂದಿಗೆ ಮಾತನಾಡಲು ಸತತ ಪ್ರಯತ್ನ ನಡೆಸಿದ್ದರು. ಆದರೆ ತಾಯಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಆತಂಕಗೊಂಡ ಮಕ್ಕಳು ಭಾನುವಾರ ಸಾಗರ್ ಜಿಲ್ಲೆಯ ಸಹೋದ್ರಾ ರಾಯ್ ವಾರ್ಡ್‌ನಲ್ಲಿರುವ ತಮ್ಮ ಮನೆಗೆ ಮರಳಿದರು.
ಮನೆಗೆ ಬಂದ ಮಕ್ಕಳಿಗೆ ಮುಂಭಾಗದ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ, ಇಡೀ ಮನೆಯಲ್ಲಿ ವಿಪರೀತ ದುರ್ವಾಸನೆ ಹರಡಿತ್ತು. ಕಿಟಕಿ, ಬಾಗಿಲು ಮುಚ್ಚಿದ್ದ ಮನೆಯಲ್ಲಿ ಯಾವುದೋ ಅನಾಹುತ ನಡೆದಿದೆ ಎಂಬ ಸಂಶಯದಿಂದ ಹುಡುಕಾಟ ನಡೆಸಿದಾಗ, ಕೋಣೆಯಲ್ಲಿದ್ದ ಬೆಡ್ ಬಾಕ್ಸ್ ತೆರೆದಾಗ ಮಕ್ಕಳು ಕಂಡ ದೃಶ್ಯ ಅವರ ಬದುಕಿನಲ್ಲೇ ಮರೆಯಲಾಗದ ಕರಾಳ ಕ್ಷಣವಾಗಿತ್ತು.
ತಾಯಿಯ ಮೃತದೇಹ ಪೆಟ್ಟಿಗೆಯೊಳಗೆ ಅರೆ ಕೊಳೆತ ಸ್ಥಿತಿಯಲ್ಲಿತ್ತು. ಹಂತಕರು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಶವವನ್ನು ಅಲ್ಲಿ ಬಚ್ಚಿಟ್ಟಿದ್ದರು ಎಂದು ಮಕ್ಕಳು ಕಣ್ಣೀರಿಟ್ಟಿದ್ದಾರೆ. ಮಮತಾ ಅಹಿರ್ವಾರ್ ಕಳೆದ 15 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಇಬ್ಬರು ಮಕ್ಕಳನ್ನು ಸಾಕಿ ಸಲಹಲು ಅವರು ವೃತ್ತಿಪರ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ಜಿಲ್ಲೆಯ ಸುತ್ತಮುತ್ತಲಿನ ಜಾತ್ರೆ ಮತ್ತು ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡಿ ಅವರು ಜೀವನ ಸಾಗಿಸುತ್ತಿದ್ದರು.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಸ್ತಾನಾ ಮತ್ತು ತಂಡ, ಸ್ಥಳದಲ್ಲಿನ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮನೆಯ ಹೊರಗಿನಿಂದ ಬೀಗ ಹಾಕಿರುವುದು ಇದು ಪರಿಚಿತರೇ ಮಾಡಿದ ಕೃತ್ಯ ಇರಬಹುದು ಎಂಬ ಅನುಮಾನ ಮೂಡಿಸಿದೆ. ಮೃತದೇಹ ಭಾಗಶಃ ಕೊಳೆತಿರುವುದರಿಂದ ಸುಮಾರು ಒಂದು ವಾರದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದೆ.
ಮರಣೋತ್ತರ ಪರೀಕ್ಷಾ ವರದಿಯು ಸಾವು ಉಸಿರುಗಟ್ಟಿ ಸಂಭವಿಸಿದೆಯೇ ಅಥವಾ ಯಾವುದಾದರೂ ಆಯುಧದಿಂದ ನಡೆದಿದೆಯೇ ಎಂಬುದನ್ನು ಖಚಿತಪಡಿಸಲಿದೆ. ಪೊಲೀಸರು ಈಗ ಮಮತಾ ಅವರ ಕೊನೆಯ ಫೋನ್ ಕರೆಗಳು ಮತ್ತು ಅವರ ಆಪ್ತರ ವಿಚಾರಣೆ ನಡೆಸುತ್ತಿದ್ದಾರೆ.

