ಮಂಗಳೂರು : ಚೆಂಡು ಹೆಕ್ಕಲು ನದಿಗಿಳಿದ ಯುವಕನೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.23ರಂದು ಸಂಜೆ ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಬಳಿ ನಡೆದಿದೆ.
ಮೃತರನ್ನು ಕಸಬಾ ಬೆಂಗ್ರೆಯ ನಿವಾಸಿ ಮುಹಮ್ಮದ್ ಸನಾವುಲ್ಲಾ (25) ಎಂದು ಗುರುತಿಸಲಾಗಿದೆ. ಫೆರಿ ಪಾಯಿಂಟ್ ಬಳಿ ಮಕ್ಕಳು ಆಟವಾಡುತ್ತಿದ್ದ ವೇಳೆ ಅವರ ಚೆಂಡು ನದಿಗೆ ಬಿದ್ದಿತ್ತು. ಮಕ್ಕಳಿಗೆ ಚೆಂಡನ್ನು ಹೆಕ್ಕಿ ಕೊಡಲು ಸನಾವುಲ್ಲಾ ನದಿಗೆ ಇಳಿದಿದ್ದು, ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ತಕ್ಷಣ ಹುಡುಕಾಟ ನಡೆಸಿ ಸನಾವುಲ್ಲಾರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಬಳಿಕ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

