ಸರ್ಕಾರಿ ಶಾಲಾ ಮಕ್ಕಳ ಮೊಟ್ಟೆ ದರ ಏರಿಕೆಗೆ ಶೀಘ್ರ ನಿರ್ಧಾರ: ಮಧು ಬಂಗಾರಪ್ಪ

0
19

ಬೆಂಗಳೂರು : ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಮೊಟ್ಟೆಯ ದರವನ್ನು ಹೆಚ್ಚಿಸುವ ಕುರಿತು ಶೀಘ್ರದಲ್ಲೇ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಅವರು ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆಯ ದರ ಏರಿಕೆ ಹಾಗೂ ಶಿಕ್ಷಕರನ್ನು ಇತರ ಸರ್ಕಾರಿ ಕೆಲಸಗಳಿಗೆ ನಿಯೋಜಿಸುತ್ತಿರುವ ಕುರಿತು ಪ್ರಶ್ನೆ ಪ್ರಸ್ತಾಪಿಸಿದರು.

ಸರ್ಕಾರ ಪ್ರಸ್ತುತ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಪ್ರತಿ ಮೊಟ್ಟೆಗೆ 6 ರೂ. ದರ ನಿಗದಿಪಡಿಸಿದೆ. ಆದರೆ ಮಾರುಕಟ್ಟೆಯಲ್ಲಿ ಕಳೆದ ಒಂದು ವರ್ಷದಿಂದ ಮೊಟ್ಟೆಯ ಬೆಲೆ 8 ರೂ.ಗಿಂತ ಹೆಚ್ಚಾಗಿದ್ದು, ನಿಗದಿತ ಮೊತ್ತದಲ್ಲಿ ಮೊಟ್ಟೆ ಪೂರೈಕೆ ಮಾಡುವುದು ಕಷ್ಟವಾಗುತ್ತಿದೆ ಎಂದು ರಾಮೋಜಿಗೌಡ ಗಮನ ಸೆಳೆದರು.

ಸರ್ಕಾರ ನೀಡುವ 6 ರೂ.ನಲ್ಲಿ ಕೇವಲ 5 ರೂ. ಮಾತ್ರ ಶಾಲಾ ಮಟ್ಟಕ್ಕೆ ತಲುಪುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿನ ವಾಸ್ತವಿಕ ದರಕ್ಕೆ ಅನುಗುಣವಾಗಿ ಮೊಟ್ಟೆಯ ದರ ಪರಿಷ್ಕರಿಸಬೇಕು ಅಥವಾ ಮೊಟ್ಟೆ ವಿತರಣೆಯ ಜವಾಬ್ದಾರಿಯನ್ನು ಏಜೆನ್ಸಿಗಳಿಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ಶಿಕ್ಷಕರನ್ನು ಬೋಧನಾ ಕಾರ್ಯದ ಹೊರತಾಗಿ ವಿವಿಧ ಕೆಲಸಗಳಿಗೆ ನಿಯೋಜಿಸುತ್ತಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ತೊಂದರೆಯಾಗುತ್ತಿದೆ ಎಂದು ರಾಮೋಜಿಗೌಡ ಹೇಳಿದರು. ಎಸ್‌ಐಆರ್, ಚುನಾವಣೆ ಕಾರ್ಯ, ಜಾತಿ ಗಣತಿ ಸೇರಿದಂತೆ ವಿವಿಧ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದ್ದು, ಶಿಕ್ಷಕರನ್ನು ಇಂತಹ ಹೆಚ್ಚುವರಿ ಕೆಲಸಗಳಿಗೆ ನಿಯೋಜಿಸುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ರಾಷ್ಟ್ರಮಟ್ಟದಲ್ಲಿ ಮೊಟ್ಟೆಯ ದರವನ್ನು ಆಧರಿಸಿ ರಾಜ್ಯದಲ್ಲೂ ದರ ನಿಗದಿಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವ ಶಾಲೆಗಳಲ್ಲಿ ಮೊಟ್ಟೆ ವಿತರಣೆಯ ನಿರ್ವಹಣೆ ಸುಲಭವಾಗುತ್ತಿದೆ. ಆದರೆ ಶೇ.100ರಷ್ಟು ಹಾಜರಾತಿ ಇರುವ ಶಾಲೆಗಳಲ್ಲಿ ಮೊಟ್ಟೆ ಪೂರೈಕೆ ಮಾಡುವ ಸಂದರ್ಭದಲ್ಲಿ ದರದ ಸಮಸ್ಯೆ ಎದುರಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ ಮೊಟ್ಟೆಯ ದರ 7 ರೂ. ಆಗಿದ್ದು, ರಾಜ್ಯದಲ್ಲೂ ಮೊಟ್ಟೆ ದರ ಹೆಚ್ಚಿಸುವ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಯೋಜನೆಯಡಿ ಮೊಟ್ಟೆ ವಿತರಿಸಲಾಗುತ್ತಿದ್ದು, ಮಾರುಕಟ್ಟೆ ದರ ಏರಿಕೆಗೆ ಅನುಗುಣವಾಗಿ ಸರ್ಕಾರದ ಅನುದಾನ ಪರಿಷ್ಕರಣೆಯಾಗಬೇಕೆಂಬ ಬೇಡಿಕೆ ಇದೀಗ ವಿಧಾನ ಪರಿಷತ್‌ನಲ್ಲೂ ಚರ್ಚೆಗೆ ಬಂದಿದೆ.