ತುಳು ಅಧಿಕೃತ ಭಾಷೆ ಘೋಷಣೆ ಐತಿಹಾಸಿಕ: ಶೈಲೇಶ್ ಆರ್.ಜೆ.

0
41

ಬೆಳ್ತಂಗಡಿ : ತುಳುವರ ಹಲವು ದಶಕಗಳ ಕನಸಾಗಿದ್ದ ತುಳು ಭಾಷೆಗೆ ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿರುವುದು ತುಳುವರ ಹೋರಾಟದ ಫಲಶ್ರುತಿ ಎಂದು ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಹೇಳಿದ್ದಾರೆ.

ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಸಮಸ್ತ ತುಳುವರ ಹೆಮ್ಮೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು, ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸಲು ಸರಕಾರಿ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿದ ಸಚಿವ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಎಲ್ಲಾ ಸಚಿವರು ಹಾಗೂ ಶಾಸಕರಿಗೆ ತುಳುವರ ಪರವಾಗಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ತುಳು ಅಧಿಕೃತ ಭಾಷೆಯ ಮಸೂದೆ ಮಂಡನೆಯಾಗುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜೊತೆಗೆ ಈ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಘಟ್ಟ ಪ್ರದೇಶದ ತಾಲೂಕುಗಳನ್ನೂ ಮಸೂದೆಯ ವ್ಯಾಪ್ತಿಗೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಘಟ್ಟ ಪ್ರದೇಶದ ಹಲವು ತಾಲೂಕುಗಳಲ್ಲಿ ಅನಾದಿ ಕಾಲದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ತುಳುವರು ವಾಸಿಸುತ್ತಿದ್ದು, ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆಯುವುದರಿಂದ ಈ ಭಾಗದ ತುಳುವರಿಗೂ ಪ್ರಯೋಜನವಾಗುವಂತೆ ಮಸೂದೆಯಲ್ಲಿ ಸೂಕ್ತವಾಗಿ ಸೇರ್ಪಡೆಗೊಳಿಸಬೇಕು ಎಂದು ತುಳುನಾಡಿನ ಶಾಸಕರಲ್ಲಿ ಅವರು ಮನವಿ ಮಾಡಿದ್ದಾರೆ.

ತುಳು ಭಾಷೆಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಬಳಕೆಗೆ ಸಂಬಂಧಿಸಿದಂತೆ ಮುಂದಿನ ಹಂತದಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ತುಳುವರ ಬಹುದಿನಗಳ ಆಶಯವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಶೈಲೇಶ್ ಆರ್.ಜೆ. ತಿಳಿಸಿದ್ದಾರೆ.