ತುಳು ಅಧಿಕೃತ ಭಾಷೆ ಘೋಷಣೆ: ಸಿಎಂಗೆ ತುಳುನಾಡು ಒಕ್ಕೂಟ ಅಭಿನಂದನೆ

0
9

ಮಂಗಳೂರು: ಹಲವು ದಶಕಗಳ ತುಳುವರ ಹೋರಾಟಕ್ಕೆ ಇಂದು ಐತಿಹಾಸಿಕ ಜಯ ದೊರೆತಿದ್ದು, ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಕೈಗೊಂಡ ಈ ಮಹತ್ವದ ನಿರ್ಧಾರವನ್ನು ತುಳುನಾಡು ಒಕ್ಕೂಟ ಸ್ವಾಗತಿಸಿದೆ.

ತುಳು ಭಾಷೆಯ ಅಧಿಕೃತತೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ತುಳುನಾಡು ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು ಅವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸುವ ಐತಿಹಾಸಿಕ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಅವರಿಗೆ ಹೃತ್ಪೂರ್ವಕ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ತುಳುವರ ಬಹುಕಾಲದ ಕನಸು ನನಸಾಗಲು ಕಾರಣವಾದ ಈ ನಿರ್ಧಾರವು ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂಬ ಆಶಯವನ್ನು ತುಳುನಾಡು ಒಕ್ಕೂಟ ವ್ಯಕ್ತಪಡಿಸಿದೆ.