ಶಾಶ್ವತ ಪರಿಹಾರಕ್ಕೆ ಆಗ್ರಹ : ಉಪ್ಪೂರಿನ ರಸ್ತೆ ಕಾಂಕ್ರೀಟೀಕರಣಕ್ಕೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಒತ್ತಾಯ

0
34

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಸರಸ್ವತಿ ನಗರ 2ನೇ ವಾರ್ಡ್‌ನ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ಪಿಯೂಸ್ ಡೇಸ್ ಮನೆ ಪರಿಸರದಿಂದ ಸಾಲ್ಮರ ರೈಲ್ವೆ ಬ್ರಿಡ್ಜ್ ಸಮೀಪದ ಭವಾನಿ ಮೆಂಡನ್ ಅವರ ಮನೆವರೆಗಿನ ರಸ್ತೆ ಸುಮಾರು 30–40 ವರ್ಷಗಳಿಂದ ಮೂಲಸೌಕರ್ಯವಿಲ್ಲದೆ ಹದಗೆಟ್ಟಿದ್ದು, ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಸುಮಾರು 40 ಮನೆಗಳ ಸಂಪರ್ಕಕ್ಕೆ ಇರುವ ಈ ಮಣ್ಣಿನ ರಸ್ತೆ ಮಳೆಗಾಲದಲ್ಲಿ ನೀರು ಹರಿಯುವ ತೋಡಿನಂತಾಗುತ್ತಿದ್ದು, ಮಕ್ಕಳು, ಹಿರಿಯರು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳು ಬೆಳೆದಿದ್ದು, ವಿಷಜಂತುಗಳ ಓಡಾಟವೂ ಕಂಡುಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮನೆಗಳಿಗೆ ಗ್ಯಾಸ್ ಹಾಗೂ ದಿನಬಳಕೆಯ ಸಾಮಗ್ರಿಗಳನ್ನು ಸಾಗಿಸುವುದಕ್ಕೂ ಸಮಸ್ಯೆಯಾಗಿದ್ದು, ರಾತ್ರಿ ವೇಳೆ ಆಟೋ ರಿಕ್ಷಾಗಳು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತವೆ. ರಸ್ತೆಯ ಅವ್ಯವಸ್ಥೆಯಿಂದ ತುರ್ತು ಸಂದರ್ಭಗಳಲ್ಲಿ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಈ ಪ್ರದೇಶದಿಂದ ಪಂಚಾಯಿತಿಗೆ ತೆರಿಗೆ ಪಾವತಿಸುತ್ತಿದ್ದರೂ ರಸ್ತೆ, ಚರಂಡಿ ಹಾಗೂ ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ರಸ್ತೆ ಕಾಂಕ್ರೀಟೀಕರಣಕ್ಕೆ ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅವರು ತಿಳಿಸಿದ್ದಾರೆ.

ತಕ್ಷಣ ಕ್ರಮಕ್ಕೆ ಆಗ್ರಹ

ರಸ್ತೆಯ ಸಮಸ್ಯೆಯನ್ನು ಸ್ಥಳೀಯ ಆಡಳಿತ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಖುದ್ದಾಗಿ ಪರಿಶೀಲಿಸಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ತಾತ್ಕಾಲಿಕವಾಗಿ ರಸ್ತೆಯಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಹಾಗೂ ಎರಡೂ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.

ಶಾಶ್ವತ ಪರಿಹಾರವಾಗಿ ರಸ್ತೆಯನ್ನು ಕೂಡಲೇ ಕಾಂಕ್ರೀಟೀಕರಣಗೊಳಿಸಲು ಶಾಸಕರು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ, ಸ್ಥಳೀಯರಾದ ರೋಷನ್ ಬಂಗೇರ ಸಾಲ್ಮರ ಹಾಗೂ ವಿಲ್ಸನ್ ದೇಸ ಅಮ್ಮುಂಜಿ ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.