ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ : ಅ.17ರಂದು ಬ್ರಹ್ಮಾವರದಲ್ಲಿ ಹಕ್ಕೊತ್ತಾಯ ಸಭೆ

0
5

ಉಡುಪಿ : ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಹೈಕೋರ್ಟ್ ಪೀಠವನ್ನು ಉಡುಪಿಯಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ, ಉಡುಪಿ ಜಿಲ್ಲೆ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ವತಿಯಿಂದ ಅ.17ರಂದು ಬೆಳಿಗ್ಗೆ 10.30ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ತಾಲೂಕು ಮಟ್ಟದ ಹಕ್ಕೊತ್ತಾಯ ಸಭೆ ನಡೆಯಲಿದೆ ಎಂದು ಸಮಿತಿಯ ಸಂಚಾಲಕ, ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆಯನ್ನು ಪರಿಶೀಲಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೆ.29ರಂದು ತ್ರಿಸದಸ್ಯ ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದನ್ನು ಸ್ವಾಗತಿಸಿದರು. ನ್ಯಾಯಮೂರ್ತಿಗಳಾದ ಅನು ಶಿವರಾಮನ್, ಎಸ್.ಜಿ. ಪಂಡಿತ್ ಹಾಗೂ ಮೊಹಮ್ಮದ್ ನವಾಜ್ ಅವರನ್ನು ಒಳಗೊಂಡ ಸಮಿತಿಯು ಬೇಡಿಕೆಯನ್ನು ಪರಿಶೀಲಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಉಡುಪಿ ಜಿಲ್ಲೆಯು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಡುವಿನ ಕೇಂದ್ರ ಸ್ಥಾನದಲ್ಲಿದ್ದು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವು ತಾಲೂಕುಗಳಿಗೂ ಸಮೀಪದಲ್ಲಿದೆ. ಹೀಗಾಗಿ, ಕರಾವಳಿ ಭಾಗಕ್ಕೆ ಉದ್ದೇಶಿತ ಸಂಚಾರಿ ಅಥವಾ ಶಾಶ್ವತ ಹೈಕೋರ್ಟ್ ಪೀಠವನ್ನು ಉಡುಪಿಯಲ್ಲೇ ಸ್ಥಾಪಿಸಬೇಕು ಎಂಬುದು ಸಮಿತಿಯ ಆಗ್ರಹವಾಗಿದೆ ಎಂದು ಹೇಳಿದರು.

ಕರಾವಳಿ ಭಾಗದ ಸಾವಿರಾರು ಕಕ್ಷಿದಾರರು ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರಿನ ಹೈಕೋರ್ಟ್‌ಗೆ ತೆರಳಬೇಕಾಗಿದೆ. ಉಡುಪಿಯಲ್ಲಿ ಪೀಠ ಸ್ಥಾಪನೆಯಾದರೆ ದೂರದ ಪ್ರಯಾಣದ ಅನಿವಾರ್ಯತೆ ಕಡಿಮೆಯಾಗಲಿದ್ದು, ಸಾರ್ವಜನಿಕರ ಸಮಯ, ಶ್ರಮ ಹಾಗೂ ಹಣಕಾಸಿನ ವೆಚ್ಚ ಉಳಿತಾಯವಾಗಲಿದೆ. ಪ್ರಾದೇಶಿಕ ಮಟ್ಟದಲ್ಲಿ ನ್ಯಾಯದಾನ ವ್ಯವಸ್ಥೆ ಲಭ್ಯವಾಗುವುದರಿಂದ ಜನರಿಗೆ ನ್ಯಾಯ ಇನ್ನಷ್ಟು ಸುಲಭವಾಗಿ ದೊರೆಯಲಿದೆ ಎಂದರು.

ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆಗೆ ಸಾರ್ವಜನಿಕ ಬೆಂಬಲ ಕ್ರೋಡೀಕರಿಸುವುದು ಹಾಗೂ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ಜಿಲ್ಲೆಯ ವಕೀಲರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಶೇಖರ್ ಹಾವಂಜೆ, ಆಲ್ವಿನ್ ಅಂದ್ರಾದೆ, ಮಹೇಶ್ ತಡೆಕಲ್ಲು, ರವಿರಂಜನ್ ಶೆಟ್ಟಿ ಉಪಸ್ಥಿತರಿದ್ದರು.