ಉಡುಪಿ : ಕರಾವಳಿಯ ಹೃದಯಭಾಷೆ, 2500 ವರ್ಷಗಳಿಗೂ ಮಿಕ್ಕಿ ಇತಿಹಾಸ ಹೊಂದಿರುವ ಅತ್ಯಂತ ಪ್ರಾಚೀನ ದ್ರಾವಿಡ ಭಾಷೆ ತುಳುವಿಗೆ ಸಂವಿಧಾನಾತ್ಮಕ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ, ತುಳುನಾಡು ರಕ್ಷಣಾ ವೇದಿಕೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ಅವರ ಮುಖಾಂತರ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತುಳು ಕೇವಲ ಭಾಷೆಯಲ್ಲ, ಅದು ಒಂದು ಸಂಸ್ಕೃತಿ, ಒಂದು ಪರಂಪರೆ, ತುಳುನಾಡಿನ ಉಸಿರು. ತನ್ನದೇ ಆದ ವಿಶಿಷ್ಟ ಲಿಪಿ, ಶ್ರೀಮಂತ ಜಾನಪದ ಸಾಹಿತ್ಯ ಭಂಡಾರ, ವಿಶ್ವವಿಖ್ಯಾತ ಯಕ್ಷಗಾನ, ದೈವಾರಾಧನೆ, ನಾಗಾರಾಧನೆ, ಭೂತಾರಾಧನೆಯಂತಹ ಅನನ್ಯ ಸಾಂಸ್ಕೃತಿಕ ವೈಭವವನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ತುಳು ಭಾಷೆಯನ್ನು ಕರ್ನಾಟಕದ ಅವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೇರಳದ ಕಾಸರಗೋಡು ಸೇರಿದಂತೆ ವಿಶ್ವದಾದ್ಯಂತ ಸುಮಾರು 2 ಕೋಟಿಗೂ ಅಧಿಕ ಮಂದಿ ಮಾತೃಭಾಷೆಯಾಗಿ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ. ಕರ್ಮಭೂಮಿ ಮುಂಬೈ ಮಹಾನಗರದಲ್ಲಿಯೇ ಸುಮಾರು 10 ಲಕ್ಷಕ್ಕೂ ಅಧಿಕ ತುಳುವರು ನೆಲೆಸಿದ್ದಾರೆ. ಇಷ್ಟೊಂದು ಜನಬಲ, ಸಾಂಸ್ಕೃತಿಕ ಹಿನ್ನೆಲೆ ಇದ್ದರೂ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ಸಿಗದಿರುವುದು 2 ಕೋಟಿ ತುಳುವರ ಹೃದಯಕ್ಕೆ ಆದ ಆಳವಾದ ನೋವಾಗಿದೆ.
ಈ ನೋವಿಗೆ ಸ್ಪಂದಿಸಿದ ಕರ್ನಾಟಕ ರಾಜ್ಯ ಸರ್ಕಾರವು ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿ ಐತಿಹಾಸಿಕ ಹಾಗೂ ಸುವರ್ಣ ನಿರ್ಧಾರ ಕೈಗೊಂಡಿದೆ. ರಾಜ್ಯ ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ತುಳುನಾಡು ರಕ್ಷಣಾ ವೇದಿಕೆ ಹೃತ್ಪೂರ್ವಕ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸುತ್ತದೆ. ರಾಜ್ಯ ಸರ್ಕಾರ ಗುರುತಿಸಿರುವ ಈ ಭಾಷೆಗೆ ಈಗ ಕೇಂದ್ರ ಸರ್ಕಾರ ಸಂವಿಧಾನಾತ್ಮಕ ಮುದ್ರೆ ಒತ್ತುವುದು ಅನಿವಾರ್ಯವಾಗಿದೆ ಎಂದು ವೇದಿಕೆ ತಿಳಿಸಿದೆ.
ನ್ಯಾಯಯುತ ಬೇಡಿಕೆಗಳು:
- ಕೋಟ್ಯಂತರ ತುಳುವರ ಭಾವನೆಗೆ ಗೌರವ ನೀಡಿ, ತುಳು ಭಾಷೆಯನ್ನು ಕೂಡಲೇ ಭಾರತ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು.
- ಪ್ರಾಚೀನತೆಯ ಹಿನ್ನೆಲೆ ಗಮನಿಸಿ ತುಳು ಭಾಷೆಗೆ ಶಾಸ್ತ್ರೀಯ ಭಾಷೆ (Classical Language) ಎಂಬ ಉನ್ನತ ಸ್ಥಾನಮಾನ ನೀಡಬೇಕು.
- ಮುಂದಿನ ಪೀಳಿಗೆಗೆ ತುಳು ಸಂಸ್ಕೃತಿ ತಲುಪಿಸಲು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ತುಳು ಭಾಷೆಯನ್ನು ಅಳವಡಿಸಲು ಸೂಕ್ತ ಅವಕಾಶ ಕಲ್ಪಿಸಬೇಕು.
ಕಲೆ, ಸಂಸ್ಕೃತಿ, ಭಾಷೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು, ನಮ್ಮ ತುಳುನಾಡಿನ 2 ಕೋಟಿ ಜನರ ಹಲವು ದಶಕಗಳ ಕನಸು, ನಿರೀಕ್ಷೆಗೆ ಸ್ಪಂದಿಸಿ, ನ್ಯಾಯ ಒದಗಿಸಿಕೊಡಬೇಕೆಂದು ಈ ಮೂಲಕ ಅತ್ಯಂತ ಕಳಕಳಿಯಿಂದ ಪ್ರಾರ್ಥಿಸುತ್ತೇವೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಜಿಲ್ಲಾಧ್ಯಕ್ಷರಾದ ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ ಲಕ್ಷ್ಮೀ ನಗರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಜಿಲ್ಲಾ ಉಪಾಧ್ಯಕ್ಷರಾದ ಮನೋಜ್ ಕೆ.ಜಿ. ರೋಡ್, ಜಿಲ್ಲಾ ಜೊತೆ ಕಾರ್ಯದರ್ಶಿ ಸುಭಾಷ್ ಸುಧನ್, ಕಾಪು ಘಟಕದ ಅಧ್ಯಕ್ಷರಾದ ನಿತಿನ್ ಕುಮಾರ್ ಶೆಟ್ಟಿ, ಬೈರಂಪಲ್ಲಿ ಘಟಕದ ಅಧ್ಯಕ್ಷರಾದ ಕೃಷ್ಣಾನಂದ ನಾಯಕ್, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪವಿತ್ರ, ಉಪಾಧ್ಯಕ್ಷೆ ಗಾಯತ್ರಿ, ಸಾಂಸ್ಕೃತಿಕ ಕಾರ್ಯದರ್ಶಿ ಮಂಜುಳಾ, ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಜಿಲ್ಲಾ ಸಂಘಟನಾ ಜೊತೆ ಕಾರ್ಯದರ್ಶಿ ಕೃಷ್ಣ ಮಾರ್ಪಲ್ಲಿ, ಬೈರಂಪಲ್ಲಿ ಘಟಕದ ಉಪಾಧ್ಯಕ್ಷರಾದ ಗುಣಕರ, ಹಾಗೂ ಪ್ರಮುಖರಾದ ಸಂತೋಷ್ ಭಂಡಾರಿ, ರವಿ ಬ್ರಹ್ಮಾವರ, ಉದಯ್ ನಾಯ್ಕ್, ಸಂತೋಷ್ ಶೆಟ್ಟಿ ಬೈರಂಪಳ್ಳಿ, ಜಿಲ್ಲಾ ಮಹಿಳಾ ಸಂಘಟನಾ ಕಾರ್ಯದರ್ಶಿ ನಿರ್ಮಲ ಎಂ. ಮೆಂಡನ್, ಸಹ ಕಾರ್ಯದರ್ಶಿ ಮಮತಾ, ಉಷಾ ಕೋಟ್ಯಾನ್, ಶ್ಯಾಮಲ, ಜ್ಯೋತಿ ಆರ್. ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

