ದಂತ ಅತಿ ಸಂವೇದನೆ

0
56

ದಂತ ಸಂವೇದನೆ ಎನ್ನುವುದು ಹಲ್ಲಿನ ಜೀವಂತಿಕೆಯ ಲಕ್ಷಣವಾಗಿರುತ್ತದೆ. ಹಲ್ಲು ಕಾರಣಾಂತರಗಳಿಂದ ತನ್ನ ಜೀವತ್ವವನ್ನು ಕಳೆದುಕೊಂಡಾಗ ತನ್ನ ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತದೆ. ಹಲ್ಲಿಗೆ ಹುಳುಕಾಗಿ ಹಲ್ಲಿನೊಳಗೆ ಕೀವು ತುಂಬಿದಾಗ ಹಲ್ಲಿಗೆ ಏಟು ಬಿದ್ದಾಗ ಅಥವಾ ಬೇರು ನಾಳ ಚಿಕಿತ್ಸೆ ಮಾಡಿಸಿದಾಗ ಹಲ್ಲು ಸಂವೇದನಾರಹಿತ ಹಂತಕ್ಕೆ ತಲುಪುತ್ತದೆ. ಹಲ್ಲಿನ ಮೇಲ್ಬಾಗದ ಪದರವಾದ ಎನಾಮಲ್‍ನಲ್ಲಿ ಯಾವುದೇ ನರ ತಂತುಗಳಿರುವುದಿಲ್ಲ. ಆದರ ಎನಾಮಲ್‍ನ ಒಳಗಿರುವ ಡೆಂಟಿನ್ ಪದರದಲ್ಲಿ ಸೂಕ್ತವಾದ ತೆಳುವಾದ ನರದ ತಂತುಗಳು ಇದ್ದು, ಇವು ಎನಾಮಲ್ ಮತ್ತು ಸಿಮೆಂಟಮ್ ಪದರ ಕರಗಿದಾಗ ಬಾಯಿಯ ಒಳಭಾಗ ತೆರೆದುಕೊಂಡಾಗ ದಂತ ಅತಿ ಸಂವೇದನೆ ಉಂಟಾಗುತ್ತದೆ ಬಿಸಿ ಪದಾರ್ಥ, ತಂಪು ಪಾನೀಯ ಕುಡಿದಾಗ ಅಥವಾ ಉಸಿರಾಡುವಾಗ ಗಾಳಿಯ ಚಲನೆಗೂ ದಂತ ದಂತ ಸಂವೇದನೆ ಉಂಟಾಗುತ್ತದೆ.

ಕಾರಣಗಳು ಏನು?

  1. ತಪ್ಪು ಕ್ರಮದಿಂದ ಹಲ್ಲುಜ್ಜುವುದು ಮತ್ತು ಅಗತ್ಯಕಿಂತ ಜಾಸ್ತಿ ಹಲ್ಲು ಉಜ್ಜುವುದು, ಅತಿಯಾದ ಹಲ್ಲುಜ್ಜುವಿಕೆಯಿಂದ ಮತ್ತು ಅಡ್ಡ್ಡಾದಿಡ್ಡಿಯಾಗಿ ಬಹಳ ಒತ್ತಡ ಹಾಕಿ ಹಲ್ಲುಜ್ಜುವುದರಿಂದ ಹಲ್ಲಿನ ಮೇಲ್ಪದರವಾದ ಎನಾಮಲ್ ಮತ್ತು ಡೆಂಟಿನ್ ಪದರಕ್ಕೆ ಹಾನಿಯಾಗಿ ದಂತ ಅತಿ ಸಂವೇದನೆ ಉಂಟಾಗುತ್ತದೆ. ಕೆಲವೊಮ್ಮೆ ವಸಡುಗಳಿಗೂ ಹಾನಿಯಾಗಿ ಹಲ್ಲಿನ ಸಿಮೆಂಟಮ್ ಪದರ ಹಾನಿಯಾಗಿ ದಂತ ಅತಿ ಸಂವೇದನೆ ಬರುವ ಸಾಧ್ಯತೆ ಇರುತ್ತದೆ.
  2. ಕೋಕ್ ಪೆಪ್ಸಿ ಮುಂತಾದ ಇಂಗಾಲಯುಕ್ತ ಆಮ್ಲೀಯ ದ್ರಾವಣ ಸೇವಿಸುವುದರಿಂದ ಹಲ್ಲಿನ ಮೇಲ್ಪದರ ಕರಗಿ ಹೋಗಿ ಅತಿ ಸಂವೇದನೆ ಉಂಟಾಗುತ್ತದೆ.
  3. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಲ್ಲಿ ಬಾಯಿಯೊಳಗೆ ಹೊಟ್ಟೆಯಿಂದ ಆಮ್ಲಿಯವಾದ ದ್ರಾವಣ ಸೇರಿಕೊಂಡು ಎನಾಮಲ್ ಪದರಕ್ಕೆ ಹಾನಿಯಾಗಿ ದಂತ ಅತೀ ಸಂವೇದನೆ ಉಂಟಾಗುತ್ತದೆ.
  4. ಅತೀ ಬಿರುಸಾದ ಎಳೆಗಳುಳ್ಳ ಗಟ್ಟಿಯಾದ ಟೂತ್ ಬ್ರಷ್ ಬಳಸುವುದರಿಂದ ಹಲ್ಲನ ಎನಾಮಲ್ ಮತ್ತು ಡೆಂಟಲ್ ಪದರಕ್ಕೆ ಹಾನಿಯಾಗಿ ಅತಿ ಸಂವೇದನೆ ಉಂಟಾಗುತ್ತದೆ.
  5. ಹಲ್ಲಿನ ಭಾಗವನ್ನು ಕೊರೆದು ಹುಳುಕಾದ ಹಲ್ಲಿನ ಭಾಗವನ್ನು ಕಿತ್ತು ಹಲ್ಲಿಗೆ ಸಿಮೆಂಟ್ ಹಾಕಿದ ಬಳಿಕ ಸರಿಯಾಗಿ ಎಲ್ಲ ಭಾಗವನ್ನು ಸಿಮೆಂಟ್‍ನಿಂದ ತುಂಬಿಸಿಲ್ಲವಾದರೂ ದಂತ ಅತೀ ಸಂವೇದನೆ ಉಂಟಾಗಬಹುದು. ಹಲ್ಲಿಗೆ ಕ್ರೌನ್ ಮಾಡಿಸಿ ಸಿಮೆಂಟಿನಿಂದ ಕ್ರೌನ್ ಕೂರಿಸಿದಾಗ ಹಲ್ಲಿನ ಕುತ್ತಿಗೆ ಭಾಗದಲ್ಲಿ ಸರಿಯಾಗಿ ಎಲ್ಲ ಹಲ್ಲಿನ ಭಾಗವನ್ನು ಸಿಮೆಂಟ್ ಸುತ್ತುವರಿಯದಿದ್ದಲ್ಲಿ ದಂತ ಅತಿ ಸಂವೇದನೆ ಉಂಟಾಗುತ್ತದೆ.
    ಯಾಕಾಗಿ ದಂತ ಅತಿ ಸಂವೇದನೆ ಉಂಟಾಗುತ್ತದೆ ನಮ್ಮ ಹಲ್ಲಿನ ಒಳಭಾಗದ ಪದರವಾದ ಡೆಂಟಿನ್‍ನಲ್ಲಿ ‘ಡೆಂಟಿನಲ್ ಟುಬ್ಯೂಲ್’ ಎಂಬ ನರದ ತಂತುಗಳಿದ್ದು, ಅದರ ಸುತ್ತ ದ್ರವ್ಯವಿರುತ್ತದೆ. ಸಿಹಿ, ಖಾರ, ಬಿಸಿ, ತಂಪು ಪಾನೀಯ ಸೇವಿಸಿದಾಗ ಈ ದ್ರÀವ್ಯದ ಚಲನೆಯಿಂದ ಡೆಂಟಿನ್ ಪದರದೊಳಗಿನ ನರತಂತುಗಳ ಚಲನೆಯಿಂದಾಗಿ ಹಲ್ಲಿನಲ್ಲಿ ಅತೀ ಸಂವೇದನೆ ಉಂಟಾಗುತ್ತದೆ. ಸಾಮಾನ್ಯವಾಗಿ ಹಲ್ಲಿನ ಕಿರೀಟದ ಭಾಗದಲ್ಲಿ ಎನಾಮಲ್ ಮತ್ತು ಬೇರಿನ ಭಾಗದಲ್ಲಿ ಸಿಮೆಂಟಮ್ ಪದರವಿರುತ್ತದೆ. ಈ ಪದರಗಳಲ್ಲಿ ನರತಂತುಗಳು ಇರುವುದಿಲ್ಲ. ಆ ಕಾರಣದಿಂದ ಬಿಸಿ, ತಂಪು, ಖಾರ, ಸಿಹಿ ತಿಂದಾಗ ಅತೀ ಸಂವೇದನೆ ಉಂಟಾಗುವುದಿಲ್ಲ. ಆದರೆ ಈ ಪದರ ಕರಗಿ ಹೋದಾಗ ಒಳಭಾಗದ ಡೆಂಟಿನ್ ಪದರ ತೆರೆದುಕೊಂಡಾಗ ಈ ಅತೀ ಸಂವೇದನೆ ಸಮಸ್ಯೆ ಉಲ್ಭಣವಾಗುತ್ತದೆ.

ಚಿಕಿತ್ಸೆ ಹೇಗೆ?

1) ಹಲ್ಲಿನ ಸವೆದು ಹೋದ ಎನಾಮಲ್ ಪದರ ಮತ್ತು ಡೆಂಟಿನ್ ಪದರವನ್ನು ಹಲ್ಲಿನ ಬಣ್ಣದ ಸಿಮೆಂಟ್‍ಗಳಿಂದ ತುಂಬಿಸಲಾಗುತ್ತದೆ. ತೆರೆದುಕೊಂಡ ಡೆಂಟಿನ್ ಪದರದ ಮೇಲೆ ಈ ಹಲ್ಲಿನ ಬಣ್ಣದ ಸಿಮೆಂಟ್ ತುಂಬಿಸಿದಾಗ ಹಲ್ಲಿನ ಅತೀ ಸಂವೇದನೆ ಇಲ್ಲವಾಗುತ್ತದೆ.
2) ಸಾಮಾನ್ಯವಾಗಿ ದಂತ ಅತಿ ಸಂವೇದನೆ ಇರುವವರಿಗೆ ವಿಶೇಷವಾದ ಅತಿ ಸಂವೇದನೆ ತಡೆಯುವ ಟೂತ್‍ಪೇಸ್ಟ್‍ಗಳು ಲಭ್ಯವಿದೆ. ದಂತ ವೈದ್ಯರ ಸಲಹೆ ಮೇರೆಗೆ ಈ ಟೂತ್‍ಪೇಸ್ಟ್ ಫಾರ್ಮಸಿಗಳಲ್ಲಿ ಸಿಗುತ್ತದೆ. ದಂತ ವೈದ್ಯರು ಹೇಳಿದಂತೆ ಅದನ್ನು ಬಳಸಿದಲ್ಲಿ ಆರಂಭಿಕ ಹಂತದ ದಂತ ಅತೀ ಸಂವೇದನೆ ಸುಲಭವಾಗಿ ಮಾಯವಾಗುತ್ತದೆ. ಕನಿಷ್ಠ ಪಕ್ಷ ಒಂದು ತಿಂಗಳ ಕಾಲ ಈ ಟೂತ್‍ಪೇಸ್ಟ್ ಬಳಸಬೇಕಾದ ಅನಿವಾರ್ಯತೆ ಇರುತ್ತದೆ.

ತಡೆಗಟ್ಟುವುದು ಹೇಗೆ?

1) ಹಲ್ಲುಜ್ಜುವಾಗ ನಿಧಾನವಾಗಿ ಸರಿಯಾದ ಕ್ರಮದಿಂದ ಹಲ್ಲುಜ್ಜಬೇಕು. ಅಡ್ಡಾದಿಡ್ಡಿಯಾಗಿ ಬಹಳ ಒತ್ತಡ ಹೇರಿ ಹಲ್ಲುಜ್ಜಬಾರದು.
2) ಬಹಳ ಮೆತ್ತಗಿನ ಎಳೆಗಳಿರುವ ಟೂತ್‍ಬ್ರಷ್ ಬಳಸಬೇಕು. ಗಡಸಾದ ಟೂತ್‍ಬ್ರಷ್ ಬಳಸಲೇಬಾರದು. ಒಂದು ಟೂತ್‍ಬ್ರಷ್‍ನ ಬಾಳಿಕೆ ಕೇವಲ ಒಂದರಿಂದ ಒಂದೂವರೆ ತಿಂಗಳು, ವರ್ಷವಿಡೀ ಗಡುಸಾದ ಒಂದೇ ಬ್ರಷ್ ಬಳಸಿದಲ್ಲಿ ಹಲ್ಲು ಹಾಳಾಗುವುದು ನಿಶ್ಚಿತ.
3) ಅತೀ ಆಮ್ಲೀಯ ಪೇಯಗಳಾದ ಕೋಕ್, ಪೆಪ್ಸಿ ಮುಂತಾದ ಇಂಗಾಲಯುಕ್ತ ಪೇಯಗಳನ್ನು ವರ್ಜಿಸಿ
4) ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯತಕ್ಕದ್ದು.
5) ದಿನಕ್ಕೆರಡು ಬಾರಿ ಹಲ್ಲುಜ್ಜಿದರೆ ಸಾಕು. ದಿನಕ್ಕೆ ನಾಲ್ಕಾರು ಬಾರಿ ಹಲ್ಲು ಉಜ್ಜುವ ಅಗತ್ಯ ಇಲ್ಲವೇ ಇಲ್ಲ.
6) ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರ ಭೇಟಿ, ಸಲಹೆ ಮತ್ತು ಮಾರ್ಗದರ್ಶನ ಅತೀ ಅಗತ್ಯ.

ಕೊನೆಮಾತು:

ಹಲ್ಲುಜ್ಜುವುದು ಒಂದು ಕಲೆ. ಸರಿಯಾದ ಕ್ರಮದಲ್ಲಿ ಹಲ್ಲುಜ್ಜಿದರೆ ಮಾತ್ರ ಹಲ್ಲಿನ ರಕ್ಷಣೆ ಸಾಧ್ಯ. ಅದೇ ರೀತಿ ಜಾಸ್ತಿ ಹಲ್ಲು ಉಜ್ಜಿದರೆ ಹಲ್ಲು ಹಾಳಾಗುವುದಿಲ್ಲ ಎನ್ನುವುದು ಭ್ರಮೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬಂತೆ ದಿನಕ್ಕೆ ನಾಲ್ಕೈದು ಬಾರಿ ಹಲ್ಲುಜ್ಜುವುದರಿಂದ ದಂತ ಅತಿ ಸಂವೇದನೆ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ.

ಡಾ|| ಮುರಲೀ ಮೋಹನ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon

LEAVE A REPLY

Please enter your comment!
Please enter your name here