ಗಡಾಯಿಕಲ್ಲು ಚಾರಣಿಗರಿಗೆ ನಿರಾಸೆ : ಗಡಾಯಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆ ಬ್ರೇಕ್

0
8

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಗಡಾಯಿಕಲ್ಲು ಚಾರಣಕ್ಕೆ ಜುಲೈ 8ರಿಂದ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ನಿರಂತರ ಮಳೆಯಿಂದಾಗಿ ಗಡಾಯಿಕಲ್ಲು ಬೆಟ್ಟದ ಕಲ್ಲುಗಳು ಹಾಗೂ ಚಾರಣದ ಹಾದಿ ತೀವ್ರವಾಗಿ ಜಾರುವಂತಾಗಿದ್ದು, ಚಾರಣ ಮಾಡುವುದು ಅಪಾಯಕಾರಿಯಾಗಿದೆ. ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಸಾರ್ವಜನಿಕರು ಹಾಗೂ ಚಾರಣಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈ ವರ್ಷದ ಜೂನ್ 1ರಂದು ಗಡಾಯಿಕಲ್ಲು ಚಾರಣಕ್ಕೆ ಅಧಿಕೃತ ಚಾಲನೆ ನೀಡಲಾಗಿತ್ತು. ಆದರೆ ಮಳೆಯ ತೀವ್ರತೆಯಿಂದ ಕೆಲವೇ ದಿನಗಳಲ್ಲಿ ಮೊದಲ ಬಾರಿಗೆ ಚಾರಣಕ್ಕೆ ನಿಷೇಧ ಹೇರಲಾಗಿತ್ತು. ಬಳಿಕ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಜೂನ್ 25ರಂದು ಮತ್ತೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಆದರೆ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿರುವುದರಿಂದ, ಜುಲೈ 8ರಿಂದ ಮತ್ತೊಮ್ಮೆ ಗಡಾಯಿಕಲ್ಲು ಚಾರಣವನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಸಹಜಗೊಂಡ ಬಳಿಕ ಚಾರಣಕ್ಕೆ ಅವಕಾಶ ನೀಡುವ ಬಗ್ಗೆ ಅರಣ್ಯ ಇಲಾಖೆ ನಿರ್ಧಾರ ಕೈಗೊಳ್ಳಲಿದೆ.

LEAVE A REPLY

Please enter your comment!
Please enter your name here