ಉಡುಪಿ: ಜಿಲ್ಲೆಯಲ್ಲಿ ದೀಪಾವಳಿ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಖರೀದಿ ಭರಾಟೆ ಜೋರಾಗಿದೆ. ಗೂಡುದೀಪ, ಹಣತೆ, ಪಟಾಕಿ, ಹೊಸ ಬಟ್ಟೆ, ಗೃಹಪಯೋಗಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.

ವೈವಿಧ್ಯಮಯ ಗೂಡುದೀಪ, ಹಣತೆಗಳು ನಗರದ ಅಂಗಡಿ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಸಾಂಪ್ರದಾಯಿಕ ಶೈಲಿಯ ಗೂಡುದೀಪ ಗಳೊಂದಿಗೆ ನವೀನ ವಿನ್ಯಾಸದ ಗೂಡುದೀಪ ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿದೆ.ಬಟ್ಟೆ, ಪ್ಲಾಸ್ಟಿಕ್, ಬಣ್ಣದ ಕಾಗದಗಳಿಂದ ಮಾಡಿದ ಗೂಡು ದೀಪಗಳು ಮಾರುಕಟ್ಟೆಯಲ್ಲಿವೆ. 25ಕ್ಕೂ ಹೆಚ್ಚು ವಿನ್ಯಾಸದ ಗೂಡುದೀಪಗಳು 60 ರೂ.ಗಳಿಂದ 350 ರೂ.ಗಳವರೆಗೆ ಇದೆ. ಮಣ್ಣಿನಿಂದ ತಯಾರಿಸಿದ, ಪಿಂಗಾಣಿ ಹಣತೆಗಳ ಖರೀದಿಯೂ ಮಾರುಕಟ್ಟೆಯಲ್ಲಿ ಜೋರಾಗಿದೆ. ಪಿಂಗಾಣಿ ಹಣತೆಗಳಿಗೆ ಹೋಲಿಕೆ ಮಾಡಿದಲ್ಲಿ ಮಣ್ಣಿನ ಹಣತೆಗಳ ಬೆಲೆ ತುಸು ಕಡಿಮೆ. ಮಣ್ಣಿನ ಒಂದು ಹಣತೆಗೆ ಅದರ ವಿನ್ಯಾಸಕ್ಕೆ ಅನುಗುಣವಾಗಿ ರೂ. 3ರಿಂದ 10 ರೂ. ಬೆಲೆಯಿದೆ. ನಗರದ ಬಟ್ಟೆ ಅಂಗಡಿಗಳಲ್ಲಿ ಹೆಚ್ಚಿನ ಜನ ಸಂದಣಿ ಇದ್ದು, ಬಟ್ಟೆಗಳ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ.
ಪಟಾಕಿ ವ್ಯಾಪಾರ ಡಲ್
ಕಳೆದ 2 ದಿನಗಳಿಂದ ಸಾಯಂಕಾಲ ನಿರಂತರ ಮಳೆ ಪರಿಣಾಮ ಪಟಾಕಿ ವ್ಯಾಪಾರ ಡಲ್ ಆಗಿದೆ. ಜೊತೆಗೆ ನಗರದಲ್ಲಿ ಬೀಡಿನಗುಡ್ಡೆ ಮತ್ತು ಅಜ್ಜರಕಾಡಿನಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದು, ಹೊರ ವಲಯದಲ್ಲಿ ವ್ಯಾಪಾರಕ್ಕೆ ಹೆಚ್ಚಿನ ಜನರು ಬುರುತ್ತಿಲ್ಲ. ಮೊಸರುಕುಡಿಕೆ, ಸುರ್ಸುರ್ಬತ್ತಿಯಂತಹ ಮಕ್ಕಳು ಸಂಭ್ರಮಿಸುವ ಪಟಾಕಿಗಳು ಉತ್ತಮವಾಗಿ ವ್ಯಾಪಾರವಾಗುತ್ತಿವೆ ಎನ್ನುತ್ತಾರೆ ಪಟಾಕಿ ವ್ಯಪಾರಿಗಳು.
ಟ್ರಾಫಿಕ್ ಜಾಮ್
ದೀಪಾವಳಿ ಶಾಪಿಂಗ್ಗಾಗಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಕಲ್ಸಂಕ, ಸಿಟಿ ಬಸ್ ಸ್ಟಾಂಡ್, ಕೆಎಂ ಮಾರ್ಗ, ಕಾರ್ಪೊರೇಶನ್ ಬ್ಯಾಂಕ್&ಮಸೀದಿ ರಸ್ತೆ, ಸರ್ವೀಸ್ ಬಸ್ ಸ್ಟಾಂಡ್ ರಸ್ತೆಯ ಇಕ್ಕೆಲಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಸಾರ್ವಜನಿಕರು&ಸಂಚಾರಿ ಪೊಲೀಸರು ಸಂಚಾರ ವ್ಯವಸ್ಥೆ ನಿಯಂತ್ರಿಸಲು ಹರ ಸಾಹಸಪಟ್ಟರು. ಬಟ್ಟೆ, ಗೃಹೋಪಯೋಗಿ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆ, ಸಿಹಿ ತಿಂಡಿ ಬೇಕರಿಗಳಲ್ಲಿ ಜನ ಸಂದಣಿ ಹೆಚ್ಚಿತ್ತು.

