ಪುತ್ತೂರಿಗೆ ಡಾ. ವಿದ್ಯಾಭೂಷಣ ಆಗಮನ: ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕ ಗಾನಾಮೃತ’ ಸಂಗೀತ ಸಂಜೆ

0
7

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ 60ನೇ ವರ್ಷಾಚರಣೆಯ ಪ್ರಯುಕ್ತ ಖ್ಯಾತ ಸಂಕೀರ್ತನಕಾರ, ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ ಅವರಿಂದ ‘ವಿವೇಕ ಗಾನಾಮೃತ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಅಕ್ಟೋಬರ್ 27ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಶಿಕ್ಷಣ ಸಂಸ್ಥೆಯಾದ ವಿವೇಕಾನಂದ ಪದವಿಪೂರ್ವ ಕಾಲೇಜು ಆರು ದಶಕಗಳ ಸಾರ್ಥಕ ಶೈಕ್ಷಣಿಕ ಪಯಣವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಸಾರ್ವಜನಿಕರಿಗಾಗಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ನಮ್ಮ ನಾಡಿನ ಪ್ರಸಿದ್ಧ ಸಂಕೀರ್ತನಕಾರರಾಗಿರುವ ಡಾ. ವಿದ್ಯಾಭೂಷಣ ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ತಮ್ಮ ಗಾಯನದ ಮೂಲಕ ಸಂಗೀತಾಸಕ್ತರಿಗೆ ರಸದೌತಣ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿರಲಿದ್ದಾರೆ.

ಆರಂಭದಲ್ಲಿ ಪುತ್ತೂರು ಎಜುಕೇಷನ್ ಸೊಸೈಟಿ ಎಂಬ ಹೆಸರಿನಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆಯು ಬಳಿಕ ವಿವೇಕಾನಂದ ವಿದ್ಯಾವರ್ಧಕ ಸಂಘವಾಗಿ ಮರುನಾಮಕರಣಗೊಂಡಿತು. ಇಂದು ಸಂಘದ ಅಧೀನದಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿವೆ.

ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆರು ದಶಕಗಳ ಶೈಕ್ಷಣಿಕ ಪಯಣಕ್ಕೆ ಸಹಕಾರ ನೀಡಿದ ಶಿಕ್ಷಣಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಆಹ್ವಾನಿಸಿದ್ದಾರೆ.