
ವಿದ್ಯಾರ್ಥಿಗಳ ಸೃಜನಶೀಲತೆ, ಕೌಶಲ್ಯಾಭಿವೃದ್ಧಿ ಹಾಗೂ ಸ್ವಾವಲಂಬನೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಳೆದ 22 ವರ್ಷಗಳಿಂದ ಶ್ರಮಿಸುತ್ತಿರುವ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಈ ಬಾರಿಯ ದೀಪಾವಳಿ ಹಬ್ಬಕ್ಕಾಗಿ ವಿವಿಧ ಬಣ್ಣ ಹಾಗೂ ಆಕರ್ಷಕ ಆಕಾರಗಳಲ್ಲಿ ಮಣ್ಣಿನ ಹಣತೆಗಳನ್ನು ಸಿದ್ಧಪಡಿಸಿದ್ದಾರೆ.
ಶಾಲೆಯಲ್ಲಿ ನಡೆದ ಶಾರದಾ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಯ ಮಹಾದಾನಿಗಳು ಹಾಗೂ ಹಿತೈಷಿಗಳಾದ ಚಾರ್ಟರ್ಡ್ ಅಕೌಂಟೆಂಟ್ ಸಿ.ಎ. ಕಾರ್ಕಳ್ ಕಮಲಾಕ್ಷ ಕಾಮತ್ ಅವರು ದೀಪ ಬೆಳಗಿಸುವ ಮೂಲಕ ವಿದ್ಯಾರ್ಥಿಗಳು ತಯಾರಿಸಿದ ಹಣತೆಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇಂತಹ ಕಾರ್ಯಯೋಜನೆಗಳು ಉತ್ತಮ ಪ್ರಯತ್ನವಾಗಿವೆ ಎಂದು ಶ್ಲಾಘಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಮಣ್ಣಿನ ಹಣತೆಗಳನ್ನು ತಯಾರಿಸುತ್ತಿದ್ದು, ಈ ಬಾರಿ ಹಣತೆಗಳ ಜೊತೆಗೆ ಪರಿಸರ ಸ್ನೇಹಿ ಬಟ್ಟೆ ಚೀಲಗಳು ಹಾಗೂ ಬತ್ತಿಯ ಕಟ್ಟುಗಳನ್ನೂ ಸಿದ್ಧಪಡಿಸಿದ್ದಾರೆ. ಈ ಎಲ್ಲಾ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ.
ಕಳೆದ ಮೂರು ವರ್ಷಗಳಿಂದ ದೀಪಾವಳಿ ಹಬ್ಬ ಆರಂಭವಾಗುವ ಮೊದಲೇ ವಿದ್ಯಾರ್ಥಿಗಳು ತಯಾರಿಸಿದ ಹಣತೆಗಳು ರಾಜ್ಯದ ವಿವಿಧ ಭಾಗಗಳಿಗೆ ಮಾರಾಟವಾಗಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಯನ್ನು ಬೆಳೆಸುವುದರ ಜೊತೆಗೆ, ಅವರಲ್ಲಿ ಸ್ವಾವಲಂಬನೆಯ ಮನೋಭಾವ ಮೂಡಿಸಲು ಈ ಯೋಜನೆ ಸಹಕಾರಿಯಾಗಿದೆ.
ವಿದ್ಯಾರ್ಥಿಗಳು ಸ್ವಾವಲಂಬಿ ಜೀವನ ನಡೆಸಲು ಕೈಗೊಂಡಿರುವ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು. ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಯಾರಿಸಿದ ಹಣತೆಗಳು, ಬಟ್ಟೆ ಚೀಲಗಳು ಹಾಗೂ ಇತರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಣಪತಿ ಪೈ, ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಅತಿಥಿಗಣ್ಯರು, ಶಾಲೆಯ ಹಿತೈಷಿಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469, 7619255170.
