ಬೆಂಗಳೂರು : ‘ನಾನು ಎಂದೂ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ನೋಡಿ ಬಜೆಟ್ ಮಂಡನೆ ಮಾಡುವುದಿಲ್ಲ. ಎಲ್ಲವೂ ಒಂದೇ ದಿನ. ಹೀಗಾಗಿ, ಯುಗಾದಿ, ಶಿವರಾತ್ರಿ ದಿನದಂದು ಮಾಂಸವನ್ನು ತಿನ್ನುತ್ತೇನೆ. ಇದರಲ್ಲಿ ತಪ್ಪೇನು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾ.6ರಂದು ಸಿಎಂ ಸಿದ್ದರಾಮಯ್ಯ ರಾಹುಕಾಲ, ಗುಳಿಕ ಕಾಲ ನೋಡಿ ಆಯವ್ಯಯ ಮಂಡನೆ ಮಾಡಿದ್ದಾರೆ ಎಂದು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನನಗೆ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಎಲ್ಲವೂ ಒಂದೇ. ನೀವು ಹಬ್ಬ ಹರಿದಿನ ಎಂದು ನೋಡುತ್ತೀರಿ. ಆದರೆ ನಾನು ಯುಗಾದಿ, ಶಿವರಾತ್ರಿಯಲ್ಲೂ ಮಾಂಸ ತಿನ್ನುತ್ತೇನೆ. ಇದು ನನ್ನ ಆಯ್ಕೆ ಹೊರತು, ಯಾವುದೇ ತಪ್ಪಲ್ಲ’ ಎಂದರು.
‘ದೇವರಿದ್ದಾನೆ ಎಂದು ನಾನು ನಂಬುತ್ತೇನೆ. ಆದರೆ, ದೇವಸ್ಥಾನದಲ್ಲೇ ದೇವರಿದ್ದಾನೆ ಎಂದರೆ ನಾನು ನಂಬುವುದಿಲ್ಲ. ಎಲ್ಲ ಕಡೆ ದೇವರಿದ್ದಾನೆ ಎನ್ನುವುದೇ ನನ್ನ ನಂಬಿಕೆ. ಇದನ್ನು ಬಸವಣ್ಣನ ತತ್ವವೂ ಆಗಿದ್ದು, ‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ. ನಾನೇನು ಮಾಡಲಿ ಬಡವನಯ್ಯ’ ಎಂದು ಬಸವಣ್ಣನ ವಚನವನ್ನು ಸಿದ್ದರಾಮಯ್ಯ ಪಠಿಸಿ ಗಮನ ಸೆಳೆದರು.
ಸಿಎಂ ಒಂದು ಶಾಲು ಬೆಲೆ 13,500 ರೂ.: ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಧರಿಸಿರುವ ಶಾಲಿನ ಬಗ್ಗೆ ಉಲ್ಲೇಖ ಮಾಡಿ ವಿಪಕ್ಷದ ಸದಸ್ಯರು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನಾನು ಈಗ ಹಾಕಿರುವುದು ಗುಣಮಟ್ಟದ ರೇಷ್ಮೇ ಶಾಲು ಎಂದರು. ಈ ವೇಳೆ ಅದರ ಬೆಲೆ 13,500 ರೂ., ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಲ್ಲೇಖಿಸಿದರು. ಇದಕ್ಕೆ ಸಿದ್ದರಾಮಯ್ಯ ಹೌದು ಎಂದು ದರವನ್ನು ಒಪ್ಪಿದರು.

