ಜಮೀನಿನ ವಾರಸುದಾರರಿಗೆ ಸಿಹಿ ಸುದ್ದಿ

0
198

‘ಮರಣ ಪ್ರಮಾಣಪತ್ರ’ ಇಲ್ಲದಿದ್ದರೂ `ಪೌತಿ ಖಾತೆ’ ಮಾಡಿಸಲು ಅವಕಾಶ !

ಬೆಂಗಳೂರು : ಕೃಷಿ ಭೂಮಿಯ ಮಾಲೀಕರು ಮರಣ ಹೊಂದಿದ ನಂತರ ಅವರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ (ಮ್ಯುಟೇಶನ್) ಮಾಡಲು ಅಲೆಯುತ್ತಿದ್ದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪೌತಿ ವಾರಸಾ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಿ ಕಂದಾಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ನಿಯಮದ ಅನ್ವಯ, ಇನ್ನು ಮುಂದೆ ವಾರಸುದಾರರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ ‘ಇ-ಪೌತಿ’ ತಂತ್ರಾಂಶದ ಮೂಲಕವೇ ಸುಲಭವಾಗಿ ಕೆಲಸ ಮುಗಿಸಿಕೊಳ್ಳಬಹುದಾಗಿದೆ.

ಮನೆ ಬಾಗಿಲಿಗೆ ಸೇವೆ : ಗ್ರಾಮ ಆಡಳಿತಾಧಿಕಾರಿಗಳು (VA) ಆಧಾರ ಸೀಡಿಂಗ್ ಸಮಯದಲ್ಲಿ ಮೃತಪಟ್ಟ ಮಾಲೀಕರ ವಿವರಗಳನ್ನು ಪತ್ತೆಹಚ್ಚಿ, ಅವರೇ ಸ್ವತಃ ಇ-ಪೌತಿ ತಂತ್ರಾಂಶದಲ್ಲಿ ಮಾಹಿತಿ ಅಪ್‌ಲೋಡ್ ಮಾಡಲಿದ್ದಾರೆ.

ದಾಖಲೆಗಳ ಸಡಿಲಿಕೆ: ಒಂದು ವೇಳೆ ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಗಾಬರಿಯಾಗಬೇಕಿಲ್ಲ. ಸ್ಥಳೀಯ ತನಿಖೆ, ಮಹಜರ್ ಮತ್ತು ವಾರಸುದಾರರ ಅಫಿಡವಿಟ್ ಪಡೆದು ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.

ಶುಲ್ಕ ವಿನಾಯಿತಿ : ಇ-ಪೌತಿ ಮಾಡಲು ಮ್ಯುಟೇಶನ್ ಶುಲ್ಕವಾದ 35 ರೂಪಾಯಿಗಳನ್ನು ಸರ್ಕಾರ ಮನ್ನಾ ಮಾಡಿದೆ. ಅಂದರೆ, ಯಾವುದೇ ಅರ್ಜಿ ಶುಲ್ಕವಿಲ್ಲದೆ ವಾರಸುದಾರರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಬಹುದು.

ವಂಶವೃಕ್ಷ ಪಡೆಯುವುದು ಸುಲಭ: ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ವಂಶವೃಕ್ಷ ಪಡೆಯಬಹುದು. ಒಂದು ವೇಳೆ ಲಭ್ಯವಿಲ್ಲದಿದ್ದರೆ ನೋಟರಿ ಸಮಕ್ಷಮ ಸಹಿ ಮಾಡಿ ಮನವಿ ಸಲ್ಲಿಸಿ ವಂಶವೃಕ್ಷ ಪಡೆಯಲು ಅವಕಾಶ ನೀಡಲಾಗಿದೆ.

ತ್ವರಿತ ವಿಲೇವಾರಿ : ಅರ್ಜಿ ಸಲ್ಲಿಸಿದ 15 ದಿನಗಳ ನೋಟಿಸ್ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದರೆ, ತಕ್ಷಣವೇ ಭೂಮಿ ತಂತ್ರಾಂಶದ ಮೂಲಕ ಹೊಸ ವಾರಸುದಾರರ ಹೆಸರು ಪಹಣಿಯಲ್ಲಿ ದಾಖಲಾಗುತ್ತದೆ.

ಜಂಟಿ ಖಾತೆಗೆ ಅವಕಾಶ : ಮೃತರ ಎಲ್ಲಾ ವಾರಸುದಾರರ ಹೆಸರನ್ನು ಜಂಟಿಯಾಗಿ ಪಹಣಿಯ ಕಾಲಂ 9ರಲ್ಲಿ ದಾಖಲಿಸಲಾಗುತ್ತದೆ. ಇದರಿಂದ ಯಾರಿಗೂ ಅನ್ಯಾಯವಾಗದಂತೆ ಹಕ್ಕುಗಳನ್ನು ರಕ್ಷಿಸಬಹುದು.

ಈ ಮೊದಲು ಖಾತೆ ಬದಲಾವಣೆ ವಿಳಂಬವಾಗುತ್ತಿದ್ದರಿಂದ ರೈತರಿಗೆ ಬೆಳೆ ಸಾಲ ಪಡೆಯಲು, ಬೆಳೆ ವಿಮೆ ಪರಿಹಾರ ಪಡೆಯಲು ಹಾಗೂ ಪಿ.ಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ತೊಂದರೆಯಾಗುತ್ತಿತ್ತು. ಈಗ ಪ್ರಕ್ರಿಯೆ ಸರಳವಾಗಿರುವುದರಿಂದ ಈ ಎಲ್ಲಾ ಸೌಲಭ್ಯಗಳು ಶೀಘ್ರವಾಗಿ ರೈತರಿಗೆ ಸಿಗಲಿವೆ.

ಈ ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಈ ಹಿಂದೆ ಇದ್ದ ಹಳೆಯ ಸುತ್ತೋಲೆಗಳನ್ನು ರದ್ದುಪಡಿಸಲಾಗಿದೆ ಎಂದು ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here