ಮಗುವಿನ ಮೇಲಿನ ಅಮಾನುಷ ಕೃತ್ಯಕ್ಕೆ ಅಂತ್ಯ : ಎನ್‌ಕೌಂಟರ್‌ನಲ್ಲಿ ಬಲಿಯಾದ ಆರೋಪಿ

0
46

ಕೋಲ್ಕತ್ತಾ : ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ 11 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಈ ಅಮಾನವೀಯ ಕೃತ್ಯ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಣೆಯಾಗಿದ್ದ 11 ವರ್ಷದ ಬಾಲಕಿಯ ಶವವನ್ನು ಚೀಲದಲ್ಲಿ ತುಂಬಿ ಕೊಳವೊಂದರಲ್ಲಿ ಎಸೆದ ಸ್ಥಿತಿಯಲ್ಲಿ ಪೊಲೀಸರು ಪತ್ತೆಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರವಾಶ್ ಮೊಂಡಲ್ನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿತ್ತು.

ಸಾಕ್ಷ್ಯ ಸಂಗ್ರಹ ಮತ್ತು ಸ್ಥಳ ಮಹಜರಿಗಾಗಿ ಆರೋಪಿಯನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು, ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡ ಆರೋಪಿ ಪ್ರವಾಶ್ ಮೊಂಡಲ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆಗೆ ಮುನ್ನ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನಾಕಾರರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು.

LEAVE A REPLY

Please enter your comment!
Please enter your name here