ಮಂಗಳೂರು/ಮಡಿಕೇರಿ: ಶೈಕ್ಷಣಿಕ ಒತ್ತಡಕ್ಕೆ ಮಣಿದು ಯುವತಿಯೊಬ್ಬಳು ಜೀವಾಂತ್ಯಗೊಳಿಸಿದ ದಾರುಣ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ನಡೆದಿದೆ.
ತಾಲೂಕಿನ ಹಳ್ಳಿಗಟ್ಟು ಕಾಲೇಜುವೊಂದರಲ್ಲಿ ಪ್ರಥಮ ವರ್ಷದ ಎಐಎಂಎಲ್ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ (19) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ರಾಯಚೂರಿನ ಮಹಾಂತಪ್ಪ ಎಂಬವರ ಏಕೈಕ ಪುತ್ರಿಯಾಗಿದ್ದು, ಮೂರು ದಿನಗಳ ಹಿಂದೆ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಅಂದು ಬಾರದವರಿಗೆ ಇಂದು ಕೂಡ ಸಿಹಿ ಹಂಚಿದ್ದಳು. ಇಂದು ತರಗತಿಗೆ ಆಗಮಿಸಿದ ನಂತರ ಸಂಜೆ 4 ಗಂಟೆಗೆ ಹಾಸ್ಟೆಲ್ ಸೇರಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಸಂಜೆ 4:30ರ ವೇಳೆಗೆ ಆಕೆಯ ಸಹಪಾಠಿಯೊಬ್ಬರು ಕೊಠಡಿಗೆ ಬಂದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಎಷ್ಟೇ ಬಡಿದರೂ, ಕೂಗಿದರೂ ಬಾಗಿಲು ತೆರೆಯದಿದ್ದಾಗ, ಆತಂಕಗೊಂಡ ಸಹಪಾಠಿ ತಕ್ಷಣ ಹಾಸ್ಟೆಲ್ ಮೇಲ್ವಿಚಾರಕರಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ಬಂದು ಬಾಗಿಲು ತೆರೆದು ನೋಡಿದಾಗ. ತೇಜಸ್ವಿನಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಈಕೆ ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ಆರು ವಿಷಯ ಬ್ಯಾಕ್‌ಲಾಗ್ ಇರುವ ಕಾರಣ ತನಗೆ ಮುಂದೆ ಓದಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.