ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ ಕುಟುಂಬದ ಮುಖ್ಯಸ್ಥರಿಗೆ ಮಂಜೂರಾದ ಗೇಣಿ ಜಮೀನಿನಲ್ಲಿ ವಿವಾಹಿತ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಷ್ಟೇ ಸಮಾನ ಹಕ್ಕು ಇದೆ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಮಹತ್ವದ ತೀರ್ಪು ನೀಡಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಬಿ. ಮುರಳೀಧರ ಪೈ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಹೆಣ್ಣುಮಕ್ಕಳ ಆಸ್ತಿ ಹಕ್ಕನ್ನು ಎತ್ತಿಹಿಡಿದಿದೆ.
ಭೂ ನ್ಯಾಯಮಂಡಳಿಯು ಕುಟುಂಬದ ಮುಖ್ಯಸ್ಥರಿಗೆ ಗೇಣಿ ಆಧಾರದ ಮೇಲೆ ಜಮೀನು ಮಂಜೂರು ಮಾಡಿದ್ದರೆ, ಅದು ಕೇವಲ ಆ ವ್ಯಕ್ತಿಯ ವೈಯಕ್ತಿಕ ಆಸ್ತಿಯಾಗಿರದೆ, ಇಡೀ ಅವಿಭಕ್ತ ಕುಟುಂಬದ ಒಳಿತಿಗಾಗಿ ದೊರೆತ ಹಕ್ಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ತಂದೆಯ ನಿಧನದ ಬಳಿಕ ಅನ್ವಯಿಸುವ ಉತ್ತರಾಧಿಕಾರ ನಿಯಮಗಳ ಪ್ರಕಾರ ಗಂಡುಮಕ್ಕಳಿಗೆ ದೊರೆಯುವಷ್ಟೇ ಸಮಾನ ಪಾಲು ವಿವಾಹಿತ ಹೆಣ್ಣುಮಕ್ಕಳಿಗೂ ದೊರೆಯಬೇಕು ಎಂದು ಸ್ಪಷ್ಟಪಡಿಸಿದೆ.
ಏಳು ಮಕ್ಕಳಿಗೆ ತಲಾ 1/7 ಪಾಲು
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಶಿವಪ್ಪ ಮತ್ತು ಅವರ ಸಹೋದರರು ಗೇಣಿದಾರರಾಗಿದ್ದು, ಭೂ ನ್ಯಾಯಮಂಡಳಿಯಿಂದ ಜಮೀನು ಮಂಜೂರು ಮಾಡಿಸಿಕೊಂಡಿದ್ದರು. ಶಿವಪ್ಪನವರ ನಿಧನದ ಬಳಿಕ ಅವರ ಪತ್ನಿ, ನಾಲ್ವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳು ಜಮೀನಿನ ಜಂಟಿ ಸ್ವಾಧೀನದಲ್ಲಿದ್ದರು.
ನಂತರ ಶಿವಪ್ಪನವರ ಮಗ ಬಸವರಾಜ್ ಮೃತಪಟ್ಟ ಬಳಿಕ ಅವರ ವಾರಸುದಾರರು ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ್ದರಿಂದ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಸಂಬಂಧ ಶಿಗ್ಗಾಂವಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಹೆಣ್ಣುಮಕ್ಕಳಿಗೂ ಸಮಾನ ಹಕ್ಕಿದೆ ಎಂದು ತೀರ್ಪು ನೀಡಿ, ತಲಾ ಏಳನೇ ಒಂದು ಭಾಗದ (1/7) ಪಾಲು ನೀಡಿತ್ತು. ಬಳಿಕ ಹಾವೇರಿಯ ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಈ ತೀರ್ಪನ್ನು ಎತ್ತಿಹಿಡಿದಿತ್ತು.
ಹೆಣ್ಣುಮಕ್ಕಳ ಸಮಾನ ಹಕ್ಕಿಗೆ ಮನ್ನಣೆ
ಕೆಳ ನ್ಯಾಯಾಲಯಗಳ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಹೈಕೋರ್ಟ್, ಅವುಗಳ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ. ಈ ಮೂಲಕ ಗೇಣಿ ಆಧಾರದ ಮೇಲೆ ಮಂಜೂರಾದ ಜಮೀನಿನ ಉತ್ತರಾಧಿಕಾರದಲ್ಲಿ ವಿವಾಹಿತ ಹೆಣ್ಣುಮಕ್ಕಳಿಗೂ ಸಮಾನ ಪಾಲು ದೊರೆಯಬೇಕೆಂಬ ಹಕ್ಕನ್ನು ನ್ಯಾಯಾಲಯ ಮತ್ತೊಮ್ಮೆ ಎತ್ತಿಹಿಡಿದಿದೆ.

