ನಿಟ್ಟೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಆಗ್ರಹ : ಸಾವಿರಾರು ಉದ್ಯೋಗ ಸೃಷ್ಟಿಗೆ ದಾರಿ

0
65

ನಿಟ್ಟೆ : ನಿಟ್ಟೆ ಗ್ರಾಮದಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾದರೆ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ದಾರಿ ತೆರೆದುಕೊಳ್ಳಲಿದ್ದು, ಸಾವಿರಾರು ಮಂದಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಸಾಮಾಜಿಕ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಜವಳಿ ಪಾರ್ಕ್ ಸ್ಥಾಪನೆಯಾದಲ್ಲಿ ಕನಿಷ್ಠ ಮೂರು ರಿಂದ ನಾಲ್ಕು ಸಾವಿರ ಜನರಿಗೆ ನೇರವಾಗಿ ಉದ್ಯೋಗ ಸಿಗುವ ಸಾಧ್ಯತೆ ಇದ್ದು, ಪರೋಕ್ಷವಾಗಿ ಇನ್ನಷ್ಟು ಉದ್ಯೋಗಾವಕಾಶಗಳು ನಿರ್ಮಾಣವಾಗಲಿವೆ. ವಿಶೇಷವಾಗಿ PUC / SSLC ಗಿಂತ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಹಾಗೂ ವಿದ್ಯೆಯಿಂದ ವಂಚಿತರಾದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಮಹಿಳೆಯರು ಹಾಗೂ ಯುವ ಸಮುದಾಯಕ್ಕೆ ಸಹ ಉತ್ತಮ ಅವಕಾಶಗಳು ಸಿಗಲಿವೆ ಎಂದು ತಿಳಿಸಲಾಗಿದೆ.

ಈ ಯೋಜನೆಯೊಂದಿಗೆ ಸಂಬಂಧಿಸಿದ ಅಂಗ ಸಂಸ್ಥೆಗಳು, ಹೋಟೆಲ್ ಹಾಗೂ ಆಹಾರ ಉದ್ಯಮಗಳು, ಅಂಗಡಿಗಳು, ವಾಣಿಜ್ಯ ಕಟ್ಟಡಗಳು ಮತ್ತು ವಸತಿ ಗೃಹಗಳ ನಿರ್ಮಾಣದಿಂದ ಸ್ಥಳೀಯವಾಗಿ ಹಲವು ಹೊಸ ಉದ್ಯಮಗಳು ಬೆಳೆಯುವ ಸಾಧ್ಯತೆ ಇದೆ. ಇದರೊಂದಿಗೆ ಸಾರಿಗೆ ವ್ಯವಸ್ಥೆಯಲ್ಲಿಯೂ ಅಭಿವೃದ್ಧಿ ಕಂಡುಬರುವುದರೊಂದಿಗೆ ಕಾರು, ರಿಕ್ಷಾ ಮತ್ತು ಬೈಕ್‌ಗಳ ಸಂಖ್ಯೆ ಹೆಚ್ಚಳವಾಗಲಿದ್ದು, ಅವುಗಳ ನಿರ್ವಹಣೆಗೆ ಸಂಬಂಧಿಸಿದ ರಿಪೇರಿ ಕೇಂದ್ರಗಳು ಸೇರಿದಂತೆ ಅನೇಕ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಮಕ್ಕಳಿಗಾಗಿ ಅಂಗನವಾಡಿ ಮತ್ತು ಬಾಲವನಗಳ ನಿರ್ಮಾಣ, ಆರೋಗ್ಯ ಸೇವೆಗಳಿಗಾಗಿ ಆರೋಗ್ಯ ಕೇಂದ್ರ ಹಾಗೂ ಅಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೂ ಈ ಯೋಜನೆ ನೆರವಾಗಲಿದೆ. ಜೊತೆಗೆ ಗ್ರಾಮ ಪಂಚಾಯತ್ ಆದಾಯವೂ ಹೆಚ್ಚಾಗಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.

ವಿದ್ಯುತ್, ನೀರು, ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹ ಜವಳಿ ಪಾರ್ಕ್ ಯೋಜನೆ ಸಹಕಾರಿಯಾಗಲಿದೆ. ಇದರಿಂದ ನಿಟ್ಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಗೂ ಅಭಿವೃದ್ಧಿಯ ಅವಕಾಶಗಳು ದೊರೆಯಲಿವೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಇಷ್ಟೊಂದು ಮಹತ್ವದ ಯೋಜನೆ ನಮ್ಮ ಕೈ ತಪ್ಪದಂತೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂದು ಬೆಳ್ಳಿಪ್ಪಾಡಿ ನೇಮಿರಾಜ್ ರೈ ಅಭಿಪ್ರಾಯಪಟ್ಟಿದ್ದಾರೆ. “ಕೈಯಲ್ಲಿರುವ ಅನ್ನದ ಬಟ್ಟಲು ಮಣ್ಣಿಗೆ ಬೀಳದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಮಹತ್ವದ ಕರ್ತವ್ಯ” ಎಂದು ಅವರು ಹೇಳಿದರು.

ನಿಟ್ಟೆಗೆ ಮಂಜೂರಾಗಿರುವ ಜವಳಿ ಪಾರ್ಕ್ ಯೋಜನೆ ನಿಟ್ಟೆಯಲ್ಲೇ ಸ್ಥಾಪನೆಯಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here