“ಸಿಕ್ಕ ಅವಕಾಶಗಳ ಸದ್ಬಳಕೆಯೇ ಯಶಸ್ಸಿನ ಕೀಲಿಕೈ”: ರವೀಂದ್ರ ಪಿ.
ಎಸ್.ಎಸ್.ಎಲ್.ಸಿವಿದ್ಯಾರ್ಥಿಗಳಿಗಾಗಿ ನಡೆದ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ

ಜೀವನದಲ್ಲಿ ನಿರೀಕ್ಷಿತವಾಗಿಯೂ, ಅನಿರೀಕ್ಷಿತವಾಗಿಯೂ ಅನೇಕ ಅವಕಾಶಗಳು ಹಲವು ಬಾರಿ ಎದುರಾಗುತ್ತವೆ. ಅವುಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಯಶಸ್ಸಿನ ಗುಟ್ಟು ಅಡಗಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ. ಹೇಳಿದರು. ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ʻಯುರೇಕಾ – 2026ʼ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಬರೆದು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, ಈ ರಜಾ ಅವಧಿಯು ಕೇವಲ ವಿಶ್ರಾಂತಿಯ ಕಾಲವಲ್ಲ; ಇದು ಕನಸುಗಳನ್ನು ರೂಪಿಸುವ ಹಾಗೂ ಭವಿಷ್ಯವನ್ನು ಕಟ್ಟುವ ಒಂದು ಸುವರ್ಣಾವಕಾಶವಾಗಿದೆ. ಇಂತಹ ಅವಕಾಶಗಳು ಜೀವನದಲ್ಲಿ ಪದೇ ಪದೇ ದೊರಕುವುದಿಲ್ಲ. ಆದ್ದರಿಂದ ಈ ರಜಾ ಅವಧಿಯನ್ನು ವ್ಯರ್ಥಗೊಳಿಸದೆ ತಮ್ಮ ಆಸಕ್ತಿಗಳಿಗನುಗುಣವಾಗಿ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆ ಮೂಲಕ ತಮ್ಮ ಸೃಜನಶೀಲತೆ ಹಾಗೂ ಜ್ಞಾನದ ಪರಿಧಿಯನ್ನು ವಿಸ್ತರಿಸುವತ್ತ ಗಮನಹರಿಸಬೇಕು ಎಂದು ಕಿವಿ ಮಾತನ್ನಿತ್ತರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಮಾತನಾಡುತ್ತಾ, ಆರು ದಿನಗಳ ಕಾಲ ನಡೆದ ಈ ವ್ಯಕ್ತಿತ್ವ ವಿಕಸನ ಶಿಬಿರವು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಮಾತ್ರವಲ್ಲದೆ, ತಮ್ಮೊಳಗೆ ಹುದುಗಿರುವ ಸುಪ್ತ ಪ್ರತಿಭೆಗಳ ಅನಾವರಣದೊಂದಿಗೆ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
ಏಪ್ರಿಲ್ 6 ರಿಂದ 11 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಸಿದ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ವಿವಿಧೆಡೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಶಿಬಿರದ ಉದ್ದೇಶವನ್ನು ಸಾರ್ಥಕಗೊಳಿಸಿದರು. ಶಿಬಿರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಜ್ಞರೆನಿಸಿಕೊಂಡ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ವೈವಿಧ್ಯಮಯ ಅವಧಿಗಳು, ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು, ಮನೋರಂಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜಕರು ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಸ್ನೇಹಾ ಬಿ. ಎಸ್, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಂಸಿನಿ ಪ್ರಾರ್ಥಿಸಿದರು. ಸಂಸ್ಕೃತ ವಿಭಾಗದ ಉಪನ್ಯಾಸಕಿ ಶೀತಲಾ ಸ್ವಾಗತಿಸಿ, ಶಿಬಿರದ ಸಹ ಸಂಯೋಜಕರಾದ ಅಕ್ಷತಾ ಕೆ ವಂದಿಸಿ, ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

