ಕೌಶಲ್ಯಾಧರಿತ ಶಿಕ್ಷಣದಿಂದ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶ: ಕೆ. ಅಭಯಚಂದ್ರ ಜೈನ್
ಮೂಡುಬಿದಿರೆ: ಕೌಶಲ್ಯಾಧರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಉದ್ಯೋಗ ಪಡೆಯುವ ಸಾಮರ್ಥ್ಯದ ಜೊತೆಗೆ ಸ್ವಂತ ಉದ್ಯಮ ಆರಂಭಿಸುವ ಆತ್ಮವಿಶ್ವಾಸವೂ ಬೆಳೆಯುತ್ತದೆ. ಕೌಶಲ್ಯಾಧರಿತ ಶಿಕ್ಷಣವೊಂದೇ ಉದ್ಯೋಗ ಸೃಷ್ಟಿಗೆ ಪರಿಣಾಮಕಾರಿ ಪರಿಹಾರೋಪಾಯವಾಗಿದ್ದು, ಎಸ್.ಎನ್. ಮೂಡಬಿದ್ರೆ ಪಾಲಿಟೆಕ್ನಿಕ್ ಸಂಸ್ಥೆ ಕೌಶಲ್ಯಾಭಿವೃದ್ಧಿಗೆ ಶಿಕ್ಷಣದಲ್ಲಿ ಒತ್ತು ನೀಡುತ್ತಿರುವುದರಿಂದ ರಾಜ್ಯದಲ್ಲೇ ಉತ್ತಮ ಪಾಲಿಟೆಕ್ನಿಕ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮಾಜಿ ಸಚಿವ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹೇಳಿದರು.

ಎಸ್.ಎನ್. ಮೂಡಬಿದ್ರೆ ಪಾಲಿಟೆಕ್ನಿಕ್ನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಾಂತ್ರಿಕ ಮಾದರಿಗಳ ಪ್ರದರ್ಶನ **‘ಕೌಶಲ್ಯಂ–2026’**ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರದರ್ಶನವನ್ನು ಉದ್ಘಾಟಿಸಿದ ಮೂಡಬಿದ್ರೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಾಜೇಂದ್ರ ಬಿ. ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ತಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡಬೇಕು. ತಾಂತ್ರಿಕ ಶಿಕ್ಷಣದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಮಾತನಾಡಿ, ಪ್ರಪಂಚದಾದ್ಯಂತ ಇಂದು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಆಧುನಿಕ ತಾಂತ್ರಿಕ ಕೌಶಲ್ಯಗಳ ಜತೆಗೆ ಪಾರಂಪರಿಕ ಕೌಶಲ್ಯಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸ್ವಂತ ಉದ್ಯಮಿಗಳಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಶ್ರೀ ಮಹಾವೀರ ಕಾಲೇಜು ಟ್ರಸ್ಟ್ನ ಕಾರ್ಯದರ್ಶಿ ಡಾ. ರಾಧಾಕೃಷ್ಣ, ಆಡಳಿತ ಮಂಡಳಿ ಸದಸ್ಯರಾದ ಸಿ.ಎಚ್. ಗಫೂರ್, ಜೆ.ಜೆ. ಪಿಂಟೊ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀಮತಿ ನೋರೋನ್ಹಾ ತರೀನಾ ರೀಟಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಸ್ಥೆಯ ನವೀನತಾ ಘಟಕದ ಸಂಚಾಲಕ ಡಾ. ಗುರುದಾಸ್ ಎಸ್.ಪಿ. ಕಾರ್ಯಕ್ರಮ ನಿರ್ವಹಿಸಿದರು. ಇ-ಕ್ಲಬ್ ಸಂಚಾಲಕಿ ಶ್ರೀಮತಿ ಜ್ಯೋತಿ ಧನ್ಯವಾದ ಸಮರ್ಪಿಸಿದರು.
110ಕ್ಕೂ ಅಧಿಕ ತಾಂತ್ರಿಕ ಮಾದರಿಗಳ ಪ್ರದರ್ಶನ
ಸಂಸ್ಥೆಯ ಏಳು ವಿಭಾಗಗಳ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ತಯಾರಿಸಿದ 110ಕ್ಕೂ ಹೆಚ್ಚು ವಿಭಿನ್ನ ಹಾಗೂ ವೈವಿಧ್ಯಮಯ ತಾಂತ್ರಿಕ ಮಾದರಿಗಳು ಪ್ರದರ್ಶನದಲ್ಲಿ ಗಮನಸೆಳೆದವು. ಸುತ್ತಮುತ್ತಲಿನ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರದರ್ಶನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯವನ್ನು ವೀಕ್ಷಿಸಿದರು.
ಆಟೊಮೊಬೈಲ್ ವಿಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಉಪಯುಕ್ತ ವಾಹನ, ಸಿವಿಲ್ ವಿಭಾಗದಲ್ಲಿ ರಬ್ಬರೀಕೃತ ಕಾಂಕ್ರೀಟ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕ್ಯೂಆರ್ ಕೋಡ್ ಆಧಾರಿತ ಮೂಲ ಪತ್ತೆಹಚ್ಚುವ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ರೋಬೋಟ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳಲ್ಲಿ ಉಂಟಾಗುವ ದೋಷಗಳನ್ನು ಪತ್ತೆಹಚ್ಚುವ ತಂತ್ರಜ್ಞಾನ, ಮೆಕೆಟ್ರಾನಿಕ್ಸ್ ವಿಭಾಗದಲ್ಲಿ ಸ್ಮಾರ್ಟ್ ವ್ಯವಸ್ಥೆ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಒಂದೇ ಶಕ್ತಿಮೂಲವನ್ನು ಬಳಸಿಕೊಂಡು ಹಲವು ಪ್ರಕ್ರಿಯೆಗಳನ್ನು ಏಕಕಾಲದಲ್ಲಿ ನಿರ್ವಹಿಸುವ ತಂತ್ರಜ್ಞಾನ ಸೇರಿದಂತೆ ಹಲವು ಮಾದರಿಗಳು ವಿಶೇಷ ಮೆಚ್ಚುಗೆಗೆ ಪಾತ್ರವಾದವು.

ವಿವಿಧ ವಿಭಾಗಗಳ ಅತ್ಯುತ್ತಮ ತಾಂತ್ರಿಕ ಮಾದರಿಗಳನ್ನು ಆಯ್ಕೆ ಮಾಡಲಾಗಿದ್ದು, ವಿದ್ಯಾರ್ಥಿಗಳ ನಾವೀನ್ಯತೆ ಹಾಗೂ ತಾಂತ್ರಿಕ ಚಿಂತನೆಗೆ ಉತ್ತೇಜನ ನೀಡಲಾಯಿತು. ಅತಿಹೆಚ್ಚು ನವೀನ ತಾಂತ್ರಿಕ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದ ವಿಭಾಗೀಯ ಕ್ಲಬ್ಗಳಿಗೆ ನೀಡಲಾಗುವ ‘ಬೆಸ್ಟ್ ಇನ್ನೊವೇಟಿವ್ ಕ್ಲಬ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ಮೆಕ್ಯಾನಿಕಲ್ ವಿಭಾಗದ ಯಂತ್ರ ಕ್ಲಬ್ ಹಾಗೂ ಮೆಕೆಟ್ರಾನಿಕ್ಸ್ ವಿಭಾಗದ ಎಂ.ಟಿ.ಎಕ್ಸ್. ಕ್ಲಬ್ ಪಡೆದುಕೊಂಡವು.
ಮೈಟ್ ಕಾಲೇಜಿನ ರೊಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥ ಡಾ. ರಾಮಲಿಂಗಂ ಹಾಗೂ ಬೊಂದೆಲ್ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನ ಆಯ್ಕೆ ಶ್ರೇಣಿ ಉಪನ್ಯಾಸಕ ಡಾ. ಸತೀಶ್ ಕೆ.ಎಂ. ಅವರು ನಿರ್ಣಾಯಕರಾಗಿ ಸಹಕರಿಸಿದರು.
