ಮಂಗಳೂರು : ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ ಅವರಿಗೆ ಪೊಲೀಸ್ ಇಲಾಖೆಯು ಗಡಿಪಾರು ನೋಟಿಸ್ ಜಾರಿ ಮಾಡಿರುವುದನ್ನು ಹಿಂದೂ ಜಾಗರಣ ವೇದಿಕೆ ಅತ್ಯಂತ ತೀವ್ರವಾಗಿ ಖಂಡಿಸಿದ್ದು, ಪೊಲೀಸ್ ಇಲಾಖೆಯ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ lಬಿಡುಗಡೆ ಮಾಡಿರುವ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿ ಸದಸ್ಯರಾದ ಪ್ರಶಾಂತ್ ಕೆಂಪುಗುಡ್ಡೆ ಇಲಾಖೆಯ ದ್ವೇಷಪೂರಿತ ನಡವಳಿಕೆಯನ್ನು ಖಂಡಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಹಿಂದೂ ಕಾರ್ಯಕರ್ತರ ನಿರಂತರ ಟಾರ್ಗೆಟ್ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹಿಂದೂ ಕಾರ್ಯಕರ್ತರನ್ನೇ ಉದ್ದೇಶಪೂರ್ವಕವಾಗಿ ಗುರಿಮಾಡಿಕೊಂಡು (ಟಾರ್ಗೆಟ್) ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ. ಇದೀಗ ಜಿಲ್ಲಾ ಸಂಯೋಜಕ ನರಸಿಂಹ ಮಾಣಿಯವರಿಗೆ ಗಡಿಪಾರು ನೋಟಿಸ್ ನೀಡಿರುವುದು ಇಲಾಖೆಯ ಪೂರ್ವಾಗ್ರಹ ಪೀಡಿತ ನಡವಳಿಕೆಗೆ ಸಾಕ್ಷಿಯಾಗಿದೆ.
ಶಾಂತಿಯುತ ವಾತಾವರಣ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರ ಹಾಗೂ ಕಾರ್ಯಕರ್ತರ ಧ್ವನಿಯನ್ನು ಅಡಗಿಸಲು ಇಲಾಖೆ ದಬ್ಬಾಳಿಕೆ ನಡೆಸುತ್ತಿದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಂಡು ಜಿಲ್ಲೆಯನ್ನು ‘ಪೊಲೀಸ್ ರಾಜ್ಯ’ವನ್ನಾಗಿ (Police State) ಪರಿವರ್ತಿಸಲು ಹೊರಟಿರುವ ಇಲಾಖೆಯ ಈ ಕ್ರಮವನ್ನು ಸಂಘಟನೆಯು ಎಂದಿಗೂ ಸಹಿಸುವುದಿಲ್ಲ.
ಇಲಾಖೆಯು ತನ್ನ ಏಕಪಕ್ಷೀಯ ಹಾಗೂ ತಾರತಮ್ಯದ ಧೋರಣೆಯನ್ನು ತಕ್ಷಣವೇ ತಿದ್ದುಕೊಳ್ಳಬೇಕು. ಹೀಗೆಯೇ ತನ್ನ ನಡವಳಿಕೆಯನ್ನು ಮುಂದುವರಿಸಿದರೆ ಮತ್ತು ಕಾರ್ಯಕರ್ತರ ಮೇಲೆ ಕಿರುಕುಳ ನೀಡಿದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ತಲೆದೋರುವ ಯಾವುದೇ ಅಹಿತಕರ ಘಟನೆಗಳು ಹಾಗೂ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಪೊಲೀಸ್ ಇಲಾಖೆಯೇ ನೇರ ಮತ್ತು ಸಂಪೂರ್ಣ ಹೊಣೆಯಾಗಲಿದೆ.
ತಕ್ಷಣವೇ ನರಸಿಂಹ ಮಾಣಿ ಅವರ ಮೇಲಿನ ಗಡಿಪಾರು ನೋಟಿಸ್ ಅನ್ನು ಹಿಂಪಡೆಯಬೇಕು, ಎಂದು ಅವರು ಆಗ್ರಹಿಸಿದ್ದಾರೆ.

