ಬೆಂಗಳೂರು: ಬೆಂಗಳೂರು, ಉಡುಪಿ ಸೇರಿ ಹಲವಾರು ಶಿಕ್ಷಣ ಸಂಸ್ಥೆ ಆಸ್ಪತ್ರೆ ಸೇರಿ ದೇಶದ 11 ರಾಜ್ಯಗಳ 21 ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದು ತನ್ನ ಸ್ನೇಹಿತ ಮದುವೆಯಾಗಲು ಒಪ್ಪದೇ ಇದ್ದುದಕ್ಕಾಗಿ ಈ ರೀತಿ ಮಾಡಿದ್ದೇನೆಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ. ಬಂಧಿತ ಯುವತಿ ತಮಿಳುನಾಡಿನ ಚೈನ್ನೈ ಮೂಲದ ರೀನಾ ಜೊಶಿಲ್ಲಾ ಎಂಬವಳಾಗಿದ್ದು ಗುಜರಾತಿನ ಅಹಮದಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದಾರೆ.
ಚೆನ್ನೈಯಲ್ಲಿ ಎಂಎನ್‌ಸಿ ಕಂಪನಿ ಡೆಲಾಯಿಟ್ ಉದ್ಯೋಗಿಯಾದ ರೀನಾ ಜೊಶಿಲ್ಟಾ ಹುಸಿ ಬಾಂಬ್ ಬೆದರಿಕೆ ಹಾಕಿ ಸಿಕ್ಕಿಬಿದ್ದಿದ್ದಾಳೆ. ಜೋಶಿಲ್ಪಾ ತನ್ನ ಸಹೋದ್ಯೋಗಿ ದಿವಿಜ್ ಪ್ರಭಾಕರ್ ಎಂಬಾತನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಈಕೆಯ ಪ್ರೀತಿಯನ್ನು ನಿರಾಕರಿಸಿದ್ದಲ್ಲದೆ, ಮದುವೆ ಆಗೋದಕ್ಕೂ ನಿರಾಕರಣೆ ಮಾಡಿದ್ದ. ಕಾನ್ವರೆನ್ಸ್ ಮೀಟಿಂಗ್ ನಲ್ಲಿ ದಿವಿಜ್ ಭೇಟಿಯಾಗಿದ್ದ ಯುವತಿ ಬೆಂಗಳೂರಿನಲ್ಲಿ ಭೇಟಿಯಾಗಿ ತಿಳಿಸಿದ್ದಳು. ಆದರೆ ದಿವಿಜ್ ಎಲ್ಲದಕ್ಕೂ ನಿರಾಕರಣೆ ಮಾಡಿದ್ದು ಈಕೆಯ ಸಿಟ್ಟಿಗೆ ಕಾರಣವಾಗಿತ್ತು. ಬಳಿಕ ದಿವಿಜ್ ಜೊತೆ ಮದುವೆಯಾದ ರೀತಿ ಫೋಟೋಗಳನ್ನು ಸೃಷ್ಟಿಸಿ ಜಾಲತಾಣದಲ್ಲಿ ಹಾಕಿದ್ದಳು. ಇದರಿಂದ ಬೇಸತ್ತ ದಿವಿಜ್ ಪ್ರಭಾಕರ್ ಸೈಬರ್ ಪೊಲೀಸರಿಗೆ ದೂರು ಕೊಟ್ಟಿದ್ದ. ಈ ನಡುವೆ, ದಿವಿಜ್ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿದ್ದು ಸುದ್ದಿ ತಿಳಿದ ಜೋಶಿಲ್ಲಾ ಸಿಟ್ಟುಗೊಂಡು ಕಳೆದ ಫೆಬ್ರವರಿ ಮತ್ತು ಜೂನ್ ತಿಂಗಳ ನಡುವೆ ದೇಶದ ಹಲವಾರು ಸಂಸ್ಥೆಗಳ ಮಾಹಿತಿ ಪಡೆದು ಹುಸಿ ಬೆದರಿಕೆ ಹಾಕಿದ್ದಳು. ಗುಜರಾತ್, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ 12 ರಾಜ್ಯಗಳ ಶಿಕ್ಷಣ ಸಂಸ್ಥೆಗಳು, ಕ್ರೀಡಾಂಗಣಗಳು ಮತ್ತು ಆಸ್ಪತ್ರೆಗಳಿಗೆ ದಿವಿಜ್ ಹೆಸರಿನಲ್ಲಿ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಳು.
ಆರೋಪಿ ರೀನಾ ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಳು. ಪ್ರಕರಣದಲ್ಲಿ ಆರೋಪಿಯನ್ನು ಕಸ್ಟಡಿಗೆ ಪಡೆಯಲು ಉಡುಪಿ ಪೊಲೀಸರು ಮುಂದಾಗಿದ್ದಾರೆ. ಜೂನ್ 16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ದೇಶಾದ್ಯಂತ 21 ಸಂಸ್ಥೆಗಳಿಗೆ ಈಕೆಯ ಕಡೆಯಿಂದ ಹುಸಿ ಬೆದರಿಕೆಯ ಸಂದೇಶ ಹೋಗಿದ್ದು ಈ ಪೈಕಿ ಒಂದರಲ್ಲಿ ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಮಾಡಿಸಿದ್ದು ನಾನೇ ಅಂತಲೂ ಬರೆದುಕೊಂಡಿದ್ದಳು.