ದಿನೇಶ್ ಅವರ ಚಿಕಿತ್ಸೆಗೆ ಕುಲಾಲ ಸಂಘದಿಂದ ಆರ್ಥಿಕ ನೆರವು ಹಸ್ತಾಂತರ

0
7

ಮಂಜೇಶ್ವರ : 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.), ಮಂಜೇಶ್ವರ–ತೂಮಿನಾಡು ಇದರ ವತಿಯಿಂದ 19ನೇ ಕುಲಾಲ ಆಸರೆ ತುರ್ತು ಸಹಾಯ ಹಸ್ತ ಸೇವಾ ಯೋಜನೆಯಡಿ ಅನಾರೋಗ್ಯದಿಂದ ಬಳಲುತ್ತಿರುವ ದಿನೇಶ್ ಅವರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.

ಕುಲಾಲ ಸಂಘದ ಎಣ್ಮಕಜೆ ಶಾಖೆಯ ವ್ಯಾಪ್ತಿಯ ಪಡ್ರೆ ಗ್ರಾಮದ ಏತಡ್ಕ ಸಮೀಪದ ಪಳ್ಳತಮೂಲೆ ನಿವಾಸಿ ದಿನೇಶ್ ಅವರ ಚಿಕಿತ್ಸೆಗೆ ನೆರವಾಗಿ ನೀಡಲಾದ ಸಹಾಯಧನದ ಚೆಕ್ ಅನ್ನು ನವೆಂಬರ್ 1ರಂದು ಜಿಲ್ಲಾ ಸಂಘದ ಪ್ರಧಾನ ಕಚೇರಿಯಲ್ಲಿ ಅವರ ಸಂಬಂಧಿಕರಾದ ಅಜಿತ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ, ಮಂಜೇಶ್ವರ ಕುಲಾಲ ಪಂಚಾಯತ್ ಶಾಖೆಯ ಅಧ್ಯಕ್ಷ ಗೋಪಾಲ ಸಾಲ್ಯಾನ್ ಕಣ್ವತೀರ್ಥ, ಜಿಲ್ಲಾ ಸಂಘದ ಸಮಿತಿ ಸದಸ್ಯರಾದ ಈಶ್ವರ್ ಕುಲಾಲ್ ಕಣ್ವತೀರ್ಥ, ತಾರಾನಾಥ ಕಣ್ವತೀರ್ಥ, ಸುಧೀರ್ ರಂಜನ್ ದೈಗೋಳಿ, ಸತೀಶ್ ಮಡ್ವ, ಆನಂದ ಸಾಲಿಯಾನ್ ಹಾಗೂ ಪ್ರಸಾದ್ ತೂಮಿನಾಡು ಉಪಸ್ಥಿತರಿದ್ದರು.

ಯೋಜನೆಯ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಹೃದಯಿ ಕುಲಾಲ ಬಂಧುಗಳಿಗೆ ಕಾಸರಗೋಡು ಜಿಲ್ಲಾ ಸಂಘವು ಕೃತಜ್ಞತೆ ಸಲ್ಲಿಸಿದೆ. ಸಮಾಜದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯ ಸೇವೆಯ ಸಂದೇಶವನ್ನು ಸಾರುತ್ತಿರುವ ಸಂಘದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.