ಸಂಭ್ರಮದ ಉತ್ಸವದಲ್ಲಿ ಪಟಾಕಿ ಅವಘಡ : ಮೂವರಿಗೆ ಗಾಯ

0
11

ಚಿಕ್ಕಮಗಳೂರು : ತಾಲೂಕಿನ ಲಕ್ಯಾ ಗ್ರಾಮದಲ್ಲಿ ಗೌರಮ್ಮನ ಉತ್ಸವ ಮೂರ್ತಿಯ ಮೆರವಣಿಗೆ ವೇಳೆ ಪಟಾಕಿ ಸಿಡಿದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೆರವಣಿಗೆಯನ್ನು ವೀಕ್ಷಿಸಲು ಜಮಾಯಿಸಿದ್ದ ಗ್ರಾಮಸ್ಥರ ಮೇಲೆ ಪಟಾಕಿಯ ಕಿಡಿಗಳು ಎರಗಿದ ಪರಿಣಾಮ ಈ ಅವಘಡ ಸಂಭವಿಸಿದೆ.

ಗಣೇಶ ವಿಸರ್ಜನಾ ಕಾರ್ಯಕ್ರಮಗಳ ಬಳಿಕ ಲಕ್ಯಾ ಗ್ರಾಮದಲ್ಲಿ ಸಂಪ್ರದಾಯದಂತೆ ಗೌರಮ್ಮನ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ರಾತ್ರಿಯಿಡೀ ನಡೆಯುವ ಧಾರ್ಮಿಕ ಕಾರ್ಯಕ್ರಮ ಹಾಗೂ ಮೆರವಣಿಗೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಸೇರಿದ್ದರು. ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ಯುವಕರು ಚಕ್ರದ ಮಾದರಿಯ ರಾಟೆಗೆ ಪಟಾಕಿಗಳನ್ನು ಕಟ್ಟಿ ಸಿಡಿಸಿದ್ದಾರೆ. ಈ ವೇಳೆ ಪಟಾಕಿಗಳು ನಿಯಂತ್ರಣ ತಪ್ಪಿ ಜನರತ್ತ ಸಿಡಿದ ಪರಿಣಾಮ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಮಂಜುನಾಥ್ ಎಂಬವರಿಗೆ ತಲೆ, ಮುಖ ಹಾಗೂ ಕಣ್ಣಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರತ್ನ ಮತ್ತು ಭಾಗ್ಯ ಎಂಬ ಇಬ್ಬರು ಮಹಿಳೆಯರಿಗೂ ಮುಖದ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಅವರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾರ್ಮಿಕ ಸಂಭ್ರಮದಿಂದ ಸಾಗುತ್ತಿದ್ದ ಉತ್ಸವದಲ್ಲಿ ಏಕಾಏಕಿ ಸಂಭವಿಸಿದ ಈ ಅವಘಡದಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪಟಾಕಿ ಸಿಡಿಸುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.