ಸುರತ್ಕಲ್ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಪಲ್ಟಿ

0
23

ಆರು ಮೀನುಗಾರರು ಪವಾಡಸದೃಶವಾಗಿ ಪಾರು

ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ ಸಮೀಪ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಪ್ರಬಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಆರು ಮಂದಿ ಮೀನುಗಾರರು ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಆಂಧ್ರಪ್ರದೇಶ ಮೂಲದ ಆರು ಮಂದಿ ಮೀನುಗಾರರು ಪ್ರಯಾಣಿಸುತ್ತಿದ್ದರು. ಸುರತ್ಕಲ್ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರೀ ಅಲೆಗಳ ಹೊಡೆತಕ್ಕೆ ದೋಣಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ದೋಣಿ ಪಲ್ಟಿಯಾಗುತ್ತಿದ್ದಂತೆ ಅದರಲ್ಲಿದ್ದ ಎಲ್ಲಾ ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದು, ಸ್ಥಳದಲ್ಲಿದ್ದ ಇತರ ಮೀನುಗಾರರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದ್ದು, ಸಮಯೋಚಿತ ರಕ್ಷಣಾ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.