ಜ.16ರಂದು ಪರಶುರಾಮ ಸ್ವಾಗತಗೋಪುರಕ್ಕೆ ಶಿಲಾನ್ಯಾಸ

0
71

ಉಡುಪಿ : ಶೀರೂರು ಮಠದ ಶ್ರೀ ವೇದವರ್ಧನ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಉಡುಪಿ ನಗರವನ್ನು ಪ್ರವೇಶಿಸುವ ಉತ್ತರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಂಬಾಗಿಲು ಜಂಕ್ಷನ್ನಲ್ಲಿ ತುಳುನಾಡಿನ ಸೃಷ್ಟಿಕರ್ತ ಭಗವಾನ್​ ಶ್ರೀ ಪರಶುರಾಮರ ಭವ್ಯ ಸ್ವಾಗತ ಗೋಪುರ ನಿರ್ಮಾಣಕ್ಕೆ 16ರಂದು ಬೆಳಗಗ್ಗೆ 9ಗಂಟೆಗೆ ದೇವತಾ ಪೂಜೆಯೊಂದಿಗೆ ಶ್ರೀಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶ್​ಪಾಲ್​ ಸುವರ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ದಕ್ಷಿಣಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯ ಸ್ವಾಗತಗೋಪುರ ನಿರ್ಮಿಸಲಾಗಿದೆ. ಅದೇ ರೀತಿ ಉತ್ತರದಿಂದ ಆಗಮಿಸುವ ಭಕ್ತರನ್ನು ಸ್ವಾಗತಿಸಲು ಅಂಬಾಗಿಲು ಜಂಕ್ಷನ್​ನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಬೃಹತ್​ ಗೋಪುರ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿದ್ಯುತ್​ ದೀಪಾಲಂಕಾರ ಉದ್ಘಾಟನೆ

ನಗರಸಭೆ ವತಿಯಿಂದ ಪರ್ಯಾಯ ಮಹೋತ್ಸವದ ವಿದ್ಯುತ್​ ದೀಪಾಲಂಕಾರಕ್ಕೆ ರೂ. 50 ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ಬಹುತೇಕ ಕೆಲಸ ಪೂರ್ಣಗೊಳಿಸಲಾಗಿದೆ. ಜ. 15 ರಂದು ಸಾಯಂಕಾಲ 7 ಗಂಟೆಗೆ ಕೋರ್ಟ್​ ಸಮೀಪ ಕೆನರಾ ಬ್ಯಾಂಕ್​ ಎದುರುಗಡೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದರು.

1 ಲಕ್ಷ ಜನರಿಗೆ ಅನ್ನಸಂತರ್ಪಣೆ
ಪರ್ಯಾಯ ಮುನ್ನಾದಿನ ಜ. 17 ರಂದು ರಾಜಾಂಗಣದ ಪಾರ್ಕಿಂಗ್​ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸುನಿಲ್ದಾಣ ಸಮೀಪ ಬೋರ್ಡ್​ ಹೈಸ್ಕೂಲ್​ನಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ. ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್​ ಕೆದ್ಲಾಯ, ಕಾರ್ಯದರ್ಶಿ ಮೋಹನ್​ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here