ಪುಣಚ : ಸಾರ್ವಜನಿಕರ ಆರೋಗ್ಯ ಮತ್ತು ಕಾನೂನು ಅರಿವು ಹೆಚ್ಚಿಸುವ ಉದ್ದೇಶದಿಂದ ಪುಳಿಂಚ ಸೇವಾ ಪ್ರತಿಷ್ಠಾನ (ರಿ.), ಮಂಗಳೂರು ಹಾಗೂ ಶ್ರೀ ದೇವಿ ವಿದ್ಯಾಕೇಂದ್ರ, ದೇವಿನಗರ, ಪುಣಚ ಇದರ ಸಹಯೋಗದಲ್ಲಿ ನವೆಂಬರ್ 29ರ ಭಾನುವಾರ ಉಚಿತ ಕಣ್ಣಿನ ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಉಚಿತ ಕಾನೂನು ಶಿಬಿರ ಆಯೋಜಿಸಲಾಗಿದೆ.
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ವಿಭಾಗ), ಮಂಗಳೂರು ಇವರ ಸಹಯೋಗದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶ್ರೀ ದೇವಿ ವಿದ್ಯಾಕೇಂದ್ರ, ದೇವಿನಗರ, ಪುಣಚದಲ್ಲಿ ಶಿಬಿರ ನಡೆಯಲಿದೆ.
ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದು, ಪುಣಚ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಅಭ್ಯಾಗತರಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಶಶಿಧರ್ ಬಿ.ಕೆ., ರಾಜೀವ ಭಂಡಾರಿ, ಕೇಪು ಜನಾರ್ದನ ಭಟ್, ರವೀಶ್ ಪೊಸವಳಿಕೆ, ಅಧ್ಯಾಪಕರಾದ ವಿನೋದ್, ನಿಶ್ಚಿತ್ ಶೆಟ್ಟಿ ಹಾಗೂ ನ್ಯಾಯವಾದಿಗಳಾದ ಚಿದಾನಂದ ಕೆದಿಲಾಯ ಮತ್ತು ಪ್ರಮೋದ್ ಪೂಜಾರಿ ಕರ್ವಾಶೆ ಭಾಗವಹಿಸಲಿದ್ದಾರೆ.
ಉಚಿತ ವೈದ್ಯಕೀಯ ಸೌಲಭ್ಯಗಳು:
ಶಿಬಿರದಲ್ಲಿ ಸಾರ್ವಜನಿಕರಿಗೆ ಕಣ್ಣಿನ ಸಂಪೂರ್ಣ ತಪಾಸಣೆ, ಅಗತ್ಯವಿರುವವರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ವತಿಯಿಂದ ಸ್ಥಳದಲ್ಲಿಯೇ ಉಚಿತ ರಕ್ತದೊತ್ತಡ (ಬಿ.ಪಿ.) ಮತ್ತು ಮಧುಮೇಹ (ಶುಗರ್) ಪರೀಕ್ಷೆ ನಡೆಸಲಾಗುವುದು.
ಉಚಿತ ಕಾನೂನು ಮಾರ್ಗದರ್ಶನ:
ಜಿಲ್ಲಾ ಹಾಗೂ ಪುತ್ತೂರು ಗ್ರಾಮಾಂತರ ಮಂಡಲದ ಕಾನೂನು ಪ್ರಕೋಷ್ಠಗಳ ವತಿಯಿಂದ ನುರಿತ ಕಾನೂನು ಪರಿಣಿತರಿಂದ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಉಚಿತ ಕಾನೂನು ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುವುದು.
ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
