ಮಂಗಳೂರು: ನಗರದ ನೀರುಮಾರ್ಗದಲ್ಲಿರುವ ಜಿ.ಆರ್. ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿ.ಆರ್. ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರಿಗೆ ವಿವಿಧ ವಿಭಾಗಗಳ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಶಿಬಿರದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ದೇವಿದಾಸ್ ಶೆಟ್ಟಿ ಮತ್ತು ಡಾ. ಪ್ರಕಾಶ್, ಸಾಮಾನ್ಯ ವೈದ್ಯಕೀಯ ಶಾಸ್ತ್ರ ವಿಭಾಗದ ಡಾ. ದೇವದಾಸ್ ರೈ, ಡಾ. ಜೂಲಿಯನ್ ಸಲ್ಡಾನಾ ಹಾಗೂ ಡಾ. ಈರಪ್ಪ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಡಾ. ಕಿಶೋರಿ, ಕಿವಿ, ಮೂಗು ಮತ್ತು ಗಂಟಲು ವಿಭಾಗದ ಡಾ. ಜೆಶ್ವಿನ್, ಕೀಲು ಮತ್ತು ಮೂಳೆ ರೋಗಶಾಸ್ತ್ರ ವಿಭಾಗದ ಡಾ. ವಿಶಾಲ್ ಹಾಗೂ ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಡಾ. ರವಿ ತೇಜ ಅವರು ಭಾಗವಹಿಸಿ ಸೇವೆ ನೀಡಲಿದ್ದಾರೆ. ಪ್ರಯೋಗಾಲಯದ ಉಸ್ತುವಾರಿಯನ್ನು ಪ್ರೊ. ಡಾ. ಸುಚೇತಾ ಶೆಟ್ಟಿ ವಹಿಸಲಿದ್ದಾರೆ.
ಶಿಬಿರದಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳು:
- ಮಧುಮೇಹ ತಪಾಸಣೆ
- ರಕ್ತದೊತ್ತಡ ತಪಾಸಣೆ
- ಕಿವಿ, ಮೂಗು ಮತ್ತು ಗಂಟಲು ತಪಾಸಣೆ
- ಸ್ತ್ರೀರೋಗ ಮತ್ತು ಮಹಿಳಾ ಆರೋಗ್ಯ ತಪಾಸಣೆ
- ಮೂಳೆ ಮತ್ತು ಕೀಲು ರೋಗಗಳ ತಪಾಸಣೆ
- ನರರೋಗ ತಪಾಸಣೆ
ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿ.ಆರ್. ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.
