ಕರಾಡ ಬ್ರಾಹ್ಮಣ ಸಭಾ ಮೈಸೂರು ಹಾಗೂ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಆಶ್ರಯದಲ್ಲಿ ಸೌಹಾರ್ದ ಒಳಾಂಗಣ ಕ್ರೀಡಾಕೂಟ

0
10

ಮಂದಾರ ರಾಜೇಶ್
​
ಮೈಸೂರಿನ ಕರಾಡ ಬ್ರಾಹ್ಮಣ ಸಭಾ (ರಿ) ಮತ್ತು ಅಗಲ್ಪಾಡಿಯ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಇವುಗಳ ಸಂಯುಕ್ತ ಆಶ್ರಯದಲ್ಲಿ, ಮುಂದಿನ ತಿಂಗಳು 14 ಮತ್ತು 15ರಂದು ನಡೆಯಲಿರುವ ‘ವಾರ್ಷಿಕ ಸಂಭ್ರಮ’ದ ಪ್ರಯುಕ್ತ ಅಕ್ಟೋಬರ್ 25, 2026ರ ಭಾನುವಾರದಂದು ಮೈಸೂರಿನ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ಒಳಾಂಗಣ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಸಂಘದ ಅಧ್ಯಕ್ಷರಾದ ಕೃಷ್ಣಮೋಹನ ಐಲುಕುಂಜೆ ಹಾಗೂ ಸಮಾಜ ಬಾಂಧವರು ದೀಪ ಬೆಳಗುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕುಮಾರಿ ಪಲ್ಲವಿ ಕೆ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು.

ಎಲ್ಲಾ ವಯೋಮಾನದವರಿಗಾಗಿ ಕಲರಿಂಗ್, ಚಿತ್ರಕಲೆ, ಚದುರಂಗ, ಕೇರಂ, ನೆನಪಿನ ಪರೀಕ್ಷೆ, ಸಂಗೀತ ಕುರ್ಚಿ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳಲ್ಲಿ 70ಕ್ಕೂ ಹೆಚ್ಚು ಸಮಾಜ ಬಾಂಧವರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಕ್ರೀಡಾಕೂಟದ ವಿಜೇತರಿಗೆ ಮುಂಬರುವ ವಾರ್ಷಿಕೋತ್ಸವದ ಶುಭ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.

ಕಾರ್ಯಕ್ರಮಕ್ಕೆ ಉಚಿತವಾಗಿ ಸ್ಥಳಾವಕಾಶ ನೀಡಿದ ಮೈಸೂರಿನ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘಕ್ಕೆ ಹಾಗೂ ರುಚಿಕರ ಭೋಜನ-ಉಪಹಾರದ ವ್ಯವಸ್ಥೆ ಮಾಡಿದ ರಾಧಾಕೃಷ್ಣ ಭಟ್ ದೈತೋಟ ಅವರಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು. ಕ್ರೀಡಾಕೂಟದ ಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಮಹೇಶ್ ಜಿ. ಘಾಟೆ ಅವರನ್ನು ಕರತಾಡನದೊಂದಿಗೆ ವಿಶೇಷವಾಗಿ ಅಭಿನಂದಿಸಲಾಯಿತು.

ಸಂಘದ ಸಹ ಕಾರ್ಯದರ್ಶಿ ನಾಗರಾಜ ಕಜಂಪಾಡಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು ಎಂದು ಕರಾಡ ಬ್ರಾಹ್ಮಣ ಸಭಾ (ಕಬ್ರಾಸ) ಮೈಸೂರು ಇದರ ಕಾರ್ಯದರ್ಶಿ ಸತ್ಯನಾರಾಯಣ ಅವರು ಮಾಹಿತಿಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ