ಕಾಸರಗೋಡು : ಗಡಿನಾಡು ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಸಂಸ್ಥೆಗಳಾದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 26, 2026ರಂದು ನಡೆಯಲಿರುವ **”ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”**ದಲ್ಲಿ ಕಾಸರಗೋಡು ಜಿಲ್ಲೆಯ ಚಿತ್ತಾರಿ ನಿವಾಸಿ ಗಿರೀಶ್ ಪಿಎಂ ಚಿತ್ತಾರಿ ಅವರಿಗೆ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಮಾಧ್ಯಮ ರತ್ನ – ಅಚೀವ್ಮೆಂಟ್ ಪ್ರಶಸ್ತಿ 2026” ಪ್ರದಾನ ಮಾಡಲಾಗುತ್ತಿದೆ.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸಾರ್ಥಕ ಸೇವೆ ಮತ್ತು ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಗೌರವಾನ್ವಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಿರೀಶ್ ಪಿಎಂ ಚಿತ್ತಾರಿ ಅವರು ಮಂಗಳೂರು ವಿಶ್ವವಿದ್ಯಾಲಯದ 2022–24ನೇ ಸಾಲಿನ ಎಂ.ಎ. ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ.
ಅವರ ಸಾಧನೆಯನ್ನು ಗುರುತಿಸಿ ಈ ಹಿಂದೆ ಕನ್ನಡ ಭವನದ “ಭರವಸೆಯ ಬೆಳಕು” ಪ್ರಶಸ್ತಿ, ಬೇಕಲ್ ರಾಮನಾಯಕರ ಪ್ರಶಸ್ತಿ, ಚುಟುಕು ಸಿರಿ ರತ್ನ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕೇರಳ–ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ವಿವಿಧ ರಾಮಕ್ಷತ್ರಿಯ ಸಮುದಾಯ ಸಂಘಗಳಿಂದಲೂ ಅವರು ಸನ್ಮಾನಿಸಲ್ಪಟ್ಟಿದ್ದಾರೆ.
ಚಿತ್ತಾರಿ ನಿವಾಸಿಯಾಗಿರುವ ಗಿರೀಶ್ ಪಿಎಂ ಅವರು ಮಲ್ಲಿಕಾರ್ಜುನ ಪಿ. ಹಾಗೂ ರಾಜಲಕ್ಷ್ಮಿ ಕೆ.ಜೆ. ದಂಪತಿಗಳ ಪುತ್ರರಾಗಿದ್ದು, ಪ್ರಸ್ತುತ ಕರಾವಳಿಯ ಜನಪ್ರಿಯ ಸುದ್ದಿ ವಾಹಿನಿಯಾದ ಅಭಿಮತ ವಾಹಿನಿಯಲ್ಲಿ ಮಂಗಳೂರು ನಗರ ಸುದ್ದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಪರ ಪತ್ರಿಕೋದ್ಯಮದ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಅವರ ಸಾಧನೆಗೆ ಇದೀಗ ಮತ್ತೊಂದು ಪ್ರತಿಷ್ಠಿತ ಗೌರವ ಸಂದಿದೆ.
ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

