(ನಮ್ಮ ದೇಶವು ಹಲವು ಭಾಷೆ, ವೇಷ, ಧರ್ಮ, ಊಟ, ಉಡುಗೆ ಪ್ರತಿ ಹಂತದಲ್ಲೂ ವೈವಿದ್ಯಮಯ ಇರುವ ಸಂಗತಿ ಸರ್ವವಿಧಿತ. ಆದರೂ ನಾವೆಲ್ಲಾ ಭಾರತಮಾತೆಯ ಹೆಮ್ಮೆಯ ಮಕ್ಕಳು. ಆಯಾ ಧರ್ಮದವರು ಆಚರಿಸುವ ಹಬ್ಬಗಳು ಅವರವರ ವಿಶ್ವಾಸ ಭರವಸೆಯ ಪ್ರತೀಕಗಳು. ಹಾಗೆಯೇ
ಶುಭ ಶುಕ್ರವಾರ (GOOD FRIDAY) ಕ್ರಿಸ್ತನ ಅನುಯಾಯಿಗಳಿಗೆ ಮಹತ್ವದ ಹಬ್ಬ. “ಜೀಸಸ್ ಮನುಷ್ಯರ ಪಾಪಗಳ ನಿವಾರಣೆಗಾಗಿ ಶ್ರಮಿಸುತ್ತಿದ್ದನು ಮತ್ತು ಸತ್ತು ಪುನರುತ್ಥಾನ ಆದರೆಂದು ನಂಬಲಾಗುತ್ತದೆ. ಆದ್ದರಿಂದ, ಈ ದಿನವನ್ನು ಪ್ರತಿಯೊಬ್ಬರ ಪಾಪಗಳಿಗೆ ಕ್ಷಮೆ ಕೇಳಲು ಆಚರಿಸಲಾಗುತ್ತದೆ. ಭಾರತದಲ್ಲಿ ಆಚರಿಸಲಾಗುವ ಪ್ರಮುಖ ಧಾರ್ಮಿಕ ದಿನಗಳಲ್ಲಿ ಶುಭ ಶುಕ್ರವಾರವು ಬಹು ಅಮೂಲ್ಯವಾದದ್ದು. ಇದು ಕ್ರಿಶ್ಚಿಯನ್ ಸಮುದಾಯ ಆದಿಯಾಗಿ ರಕ್ಷಣೆ ಬಯಸುವ ಎಲ್ಲರಿಗೂ ಪ್ರಮುಖವಾಗಿದೆ. 40 ವಸಂತ ದಿನಗಳ (lent days) ನಂತರ 40 ದಿನಗಳ ಕಾಲ ಕ್ರೈಸ್ತ ಬಾಂಧವರು ಉಪವಾಸವಿದ್ದು, ದೇಹ ಶುದ್ಧೀಕರಣ ಮಾಡುತ್ತಾರೆ. ಮಾಂಸಾಹಾರ ವರ್ಜನೆ, ಆಡಂಬರವಿಲ್ಲದ ಜೀವನ ಕಳೆಯುವ ಮೂಲಕ ಪ್ರಾಯಶ್ಚಿತ್ತ ಮನೊಭಾವ ಹೊಂದಿದವರರಾಗಿ ನಿತ್ಯ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಶುಭ ಶುಕ್ರವಾರ (GOOD FRIDAY) ಮಹಾ ವೃತವವು 18 April 2025 ರಂದು ಆಚರಿಸಲ್ಪಡುತ್ತಿದೆ. ಸಕಾರಣ ಇದರ ಘನತೆ ಗೌರವ ವಿಶಿಷ್ಟತೆಯನ್ನು ಸಾರುವುದಕ್ಕಾಗಿ ಈ ಲೇಖನವನ್ನು ಬರೆಯಲಾಗಿದೆ)
“ ಪರೋಪಕಾರಾರ್ಥಂ ಇದಂ ಶರೀರಂ”
“ಪಾಪವಿಲ್ಲದ ಒಬ್ಬ ಮನುಷ್ಯನು ಪರರ ಕ್ಷೇಮಕ್ಕಾಗಿ ಮಾತ್ರವಲ್ಲ ತನ್ನ ವೈರಿಗಳ ಕ್ಷೇಮಕ್ಕಾಗಿಯೂ ತನ್ನನ್ನೇ ಬಲಿದಾನ ಮಾಡಿಕೊಂಡನು. ಆತನು ಲೋಕ ವಿಮೋಚನೆಗೆ ಸಾಧಕನಾದನು. ಆತನು ಯೇಸು ಮಾತ್ರವೇ ಆಗಿರುತ್ತಾನೆ”. —- ಎಂದು ಮಹಾತ್ಮ ಗಾಂಧಿಯವರು ಹೇಳಿರುವ ಆತ್ಮ ಸದೃಶ ವಾಕ್ಯವು ಪ್ರಭು ಯೇಸು ಕ್ರಿಸ್ತನು ಸಮಸ್ತ ಜನರ ಉದ್ಧಾರಕ್ಕಾಗಿ ತಾನು ಮಹಾಬಲಿಯಾದನು ಎಂದು ಅರ್ಥ ಬರುತ್ತದೆ. “ ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಸಂಸ್ಕೃತ ಶ್ಲೋಕಕ್ಕೆ ಕ್ರಿಸ್ತೇಸು ಅನ್ವರ್ಥನಾಗಿರುವುದು ಅಕ್ಷರಶಃ ಸತ್ಯ. ಏಕೆಂದರೆ ದೇವರು ಲೋಕದ ಮೇಲೆ ಎಷ್ಟು ಪ್ರೀತಿಯನಿಟ್ಟು ತನ್ನ ಒಬ್ಬನೆ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ; ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ (ಯೇಸು) ವನ್ನು ಕೊಟ್ಟನು. ಸಂತ ಹೋಹಾನನು ಬರೆದ 3 ನೇ ಅಧ್ಯಾಯ 16ನೆ ವಚನದಲ್ಲಿ ಪ್ರವಾದಿಸಿರುವುದು ಸರ್ವಜನಾಂಗದ ರಕ್ಷಣೆಗೆ ಯೇಸುವಿನ ಪ್ರಾಣತ್ಯಾಗ ಅವಶ್ಯವಿತ್ತು ಎಂಬುದು ದೃಢವಾಗುತ್ತದೆ. ಶುಭ ಶುಕ್ರವಾರವನ್ನು ಪವಿತ್ರ ಶುಕ್ರವಾರ, ಈಸ್ಟರ್ ಫ್ರೈಡೇ, ಹೋಲೀ ಫ್ರೈಡೇ, God’s Friday ,Good Friday ಎಂದೆಲ್ಲಾ ಕರೆಯಲಾಗುತ್ತದೆ. ಈ ದಿನವನ್ನು ವಿಶ್ವಾದ್ಯಂತ ಇರುವ ಕ್ರೈಸ್ತರು ಮತ್ತು ಅವರ ಅನುಯಾಯಿಗಳು ಆಚರಿಸುತ್ತಾರೆ. ಮಾನವರ ಪಾಪಗಳಿಗಾಗಿ ಯೇಸು ನರಳಿದನು ಮತ್ತು ಸತ್ತನು ಎಂದು ನಂಬಲಾಗಿದೆ. ಆದ್ದರಿಂದ, ಈ ದಿನವನ್ನು ಪ್ರತಿಯೊಬ್ಬರು ಪಾಪಗಳ ಕ್ಷಮೆ ಕೇಳಲು ಆಚರಿಸಲಾಗುತ್ತದೆ. ಜನರು ತಮ್ಮ ಜೀವನದಲ್ಲಿ ನೋವು, ಸಂಕಟ ಮತ್ತು ದುಃಖ, ಪಾಪಗಳಿಂದ ಮುಕ್ತರಾಗಬೇಕೆಂದು ಪ್ರಾರ್ಥಿಸುತ್ತಾರೆ. ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಯೇಸುವಿನ ಮರಣವು ಎಲ್ಲಾ ಪಾಪಗಳ ಅಂತ್ಯವನ್ನು ಸೂಚಿಸುತ್ತದೆ. ಎಲ್ಲಾ ಪಾಪಗಳನ್ನು ತೊಡೆದುಹಾಕಿದ ನಂತರ, ಹೊಸ ಆರಂಭದ ಸಾಧ್ಯತೆಯಿದೆ ಎಂದು ಇದು ಖಚಿತವಾಗಿ ತೋರಿಸುತ್ತದೆ.
ಮಹಾ ರಕ್ಷಕ ಯೇಸು ಪದದ ಉತ್ಪತ್ತಿ ಮತ್ತು ಅರ್ಥ ವಿಶೇಷತೆ
ಯೇಸು ಅಥವಾ ‘ಜೀಸಸ್’ ಪದವು ಗ್ರೀಕ್ ಭಾಷೆಯಿಂದ ವ್ಯುತ್ಪನ್ನವಾದ ಪದವೆಂದು ತಜ್ಞರು ಹೇಳುತ್ತಾರೆ. ಮಾನವರ ಕಲ್ಯಾಣಕ್ಕೆ ‘ದೇವರೇ ಮೋಕ್ಷ’ ಎಂಬುದು ಇದರ ಅರ್ಥ ಎಂಬುದು ತಜ್ಞರ ಅಭಿಪ್ರಾಯ. ‘ಕ್ರಿಸ್ತ’ನ ಅರ್ಥ ‘ರಕ್ಷಕ’. ಈ ಅರ್ಥದಲ್ಲಿ ಯೇಸು ಕ್ರಿಸ್ತ (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. ಲೋಕದಲ್ಲಿ ಜನರು ತಮ್ಮ ಪಾಪನಿವಾರಣೆಗಾಗಿ ಕಲ್ಲು, ಮಣ್ಣು, ಲೋಹ, ಮರದ ಮೂರ್ತಿ ರೂಪದ ದೇವರಿಗೆ ಕೋಳಿ, ಕೋಣ, ಮೇಕೆ ಮುಂತಾದ ಪ್ರಾಣಿಗಳನ್ನು ಬಲಿಕೊಟ್ಟು ಶಾಂತಿ ಪಡೆಯಲು, ಪರಿಶುದ್ಧ ಜೀವನಕ್ಕಾಗಿ ಪ್ರಯತ್ನಿಸುತ್ತಾರೆ. ಆದರೆ ಇದು ನಿಷ್ಪ್ರಯೋಜಕ. ಇದು ಮೂಡನಂಬಿಕೆಯಾಗಿದೆ. ಇದರಿಂದ ಪಾಪ – ಶಾಪ ನಿವಾರಣೆಯಾಗದು. ಮನುಷ್ಯರ ಸಕಲವಿಧವಾದ ಪಾಪನಿವಾರಣೆಗೆ ಪಾಪ ರಹಿತ ಜೀವಿತದ ಪರಿಶುದ್ಧ ರಕ್ತ ಪ್ರೋಕ್ಷಣೆಯಿಂದ ಮಾತ್ರ ಸಾಧ್ಯ. ಆ ಶುದ್ಧಾತಿ ಶುದ್ಧ ರಕ್ತವನ್ನು ಯೇಸು ಸ್ವಾಮಿ ಶಿಲುಬೆಯ ಮೇಲೆ ಹರಿಸುವುದರ ಮೂಲಕ ಒಂದೇ ಸಾರಿಗೆ ಸಕಲ ಜನರ ಪಾಪ ನಿವಾರಣೆ ಮಾಡಿದನು. ಹಾಗಾಗಿ ಪಾಪ ಕ್ಷಮೆಗಾಗಿ ಯಾವುದೇ ನರಬಲಿಯಾಗಲಿ ಅಥವಾ ಪ್ರಾಣಿಬಲಿಯಾಗಲಿ ಅವಶ್ಯಕತೆಯಿಲ್ಲ. ಅದು ಅಕ್ಷಮ್ಯ ಅಪರಾಧವಾದಿತು.
೧ನೇ ಕೋರಿಂಥದವರೆಗೆ ಬರೆದ ಪತ್ರಿಕೆಯ ೧ : ೧೮ ವಚನದಲ್ಲಿ ಶಿಲುಬೆಯ ಮಾತು ಲೋಕದ ಜನರಿಗೆ ಹುಚ್ಚು ಮಾತಾಗಿದೆ. ರಕ್ಷಣೆಯ ಮಾರ್ಗದಲ್ಲಿ ಇರುವ ನನಗಾದರೂ ದೇವರ ಶಕ್ತಿಯಾಗಿದೆ. ಎಂದು ಪೌಲನು ಹೇಳಿರುವ ಮಾತು ನಿಜಕ್ಕೂ ಸತ್ಯವೆ. ಶಿಲುಬೆ ಎಂಬುದು ನಿರಾಸೆ, ಹೋರಾಟ, ನಿತ್ರಾಣ, ರೋಗ, ಹಿಂಸೆ, ಸಂಕಟ, ಶೋಧನೆ ಮುಂತಾದ ಅನಿಷ್ಟಗಳನ್ನು ಗೆದ್ದ ಸಾಧನ ದ್ಯೋತಕವಾಗಿದೆ. ಹಾಗಾಗಿ ಲೋಕ ಕಲ್ಯಾಣಕ್ಕಾಗಿ ಸೈತಾನಿ ಶಕ್ತಿಗಳ ಪ್ರಭಾವ ಅಡಗಿಸಲು ಶಿಲುಬೆಯಲ್ಲಿ ತೂಗಾಡಿದ ಏಕೈಕ ದೇವರು ಯೇಸು ಎಂದು ಸತ್ಯವೇದ ನಿದರ್ಶನ ನೀಡುತ್ತದೆ.
ಪರಮಪಿತ ತಂದೆಯಾದ ದೇವರ ಚಿತ್ತ ಸಂಕಲ್ಪ ನೆರವೇರಿಸಲು ಸಕಲ ಸಂಕಟ ಸಹಿಸದ ಯೇಸುಸ್ವಾಮಿ
ತಾನು ಯಾವುದೆ ಅಪರಾಧ ಮಾಡದಿದ್ದರೂ ಉಣ್ಣೆ ಕತ್ತರಿಸುವ ಕುರಿಮರಿಯಂತೆ ಮೌನವಾಗಿದ್ದ ಯೇಸು, ತಂದೆಯ ಚಿತ್ತ ನೇರವೆರಿಸುವುದಕ್ಕಾಗಿ ಸಹಿಷ್ಣುತೆಯಿಂದ ಇದ್ದನು. ಸರ್ವರೀತಿಯ ವೇದನೆ, ನಿಂದನೆ, ಅಪಮಾನ. ಸಹಿಸಿದನು. ಉಪದ್ರವಗಳು, ತಾಪ, ತ್ಯಾಗ, ಮಮತೆ, ಶಕ್ತಿ, ನಿರಾಸೆ, ಹತಾಸೆಗಳನ್ನು ಶಿಲುಬೆಯಲ್ಲಿ ತೀರಿಸಿದ ಘಟನಾವಳಿಗಳೆ ಶುಭ ಶುಕ್ರವಾರದ ಸಂದೇಶ. ಮರಣವು ದುಃಖದ ವಾತಾವರಣ ನಿಡುವುದಾದರೂ ಸತ್ಯವೇದವು ಸರ್ವಜನಾಂಗದ ರಕ್ಷಣೆಗಾಗಿ ಕ್ರಿಸ್ತನು ಮಹಾಯಜ್ಞವಾದ್ದನ್ನು ಶುಭವೆಂದೆ ಪರಿಗಣಿಸಿದೆ. ಏಕೆಂದರೆ ಸತ್ತ ನಂತರ ಮನುಷ್ಯನು ಪರಲೋಕ ರಾಜ್ಯಕ್ಕೆ ಹೋಗಲು ಇದೊಂದೆ ಮಾರ್ಗವಿದ್ದಿತು. ಪರಿಶುದ್ಧ ರಕ್ತಪ್ರೋಕ್ಷಣೆ ಇಲ್ಲದೆ ನಿತ್ಯಜೀವವಿಲ್ಲ. ಆ ಅಮೂಲ್ಯ ರಕ್ತ ಕ್ರಿಸ್ತನಲ್ಲಿ ಮಾತ್ರವೆ ಇತ್ತು. ಒಬ್ಬನಾದರೂ ನಾಶವಾಗದೆ ಎಲ್ಲರೂ ದೇವರ ರಾಜ್ಯವನ್ನು ಕಾಣಬೇಕೆಂಬ ಮಹಾ ಆಶಯದೊಂದಿಗೆ ಇದೆಲ್ಲವೂ ನಡೆಯಲೇಬೇಕಾಗಿತ್ತು. ಆದಾಮ – ಹವ್ವಳು ದೇವರ ಕಟ್ಟಳೆ ಮುರಿದು ಮಾಡಿದ ಆನಾಚರಕ್ಕಾಗಿ ದೇವರಿಂದ ತಳ್ಳಲ್ಪಟ್ಟು ಪಾಪುಗಳಾಗಿ ಯಾತನಾಮಯ ಬದುಕು ನಡೆಸಬೇಕಾಯಿತು. ಮತ್ತೆ ಜನರ ರಕ್ಷಣೆಗಾಗಿ ಹಳೆ ಒಡಂಬಡಿಕೆಯಲ್ಲಿ ನುಡಿದ ಪ್ರವಾದನೆಯನ್ನು ಯೇಸು ತನ್ನ ಪರಿಶುದ್ಧ ರಕ್ತಸುರಿಸುವ ಮೂಲಕ ದೇವರು ಮತ್ತು ಮನುಷ್ಯರ ಬಾಂಧವ್ಯಕ್ಕೆ ಸೇತುವೆಯಾದನು. ಯೇಸು ಕ್ರಿಸ್ತನು ಶಾಂತಿ, ಪ್ರೀತಿ ಮತ್ತು ವಿಮೋಚನೆಯ ಸಂದೇಶದೊಂದಿಗೆ ಭೂಮಿಗೆ ಬಂದನು, ತನ್ನನ್ನು ಅನುಸರಿಸುವ ಎಲ್ಲರಿಗೂ ಶಾಶ್ವತ ಜೀವನದ ಭರವಸೆಯೊಂದಿಗೆ. ಅವರು ಎಂದಿಗೂ ಕಾನೂನನ್ನು ಮುರಿಯಲಿಲ್ಲ ಅಥವಾ ಅಪರಾಧ ಮಾಡಲಿಲ್ಲ ಮತ್ತು ದಂಗೆಯನ್ನು ಪ್ರಾರಂಭಿಸಲಿಲ್ಲ. ಆದಾಗ್ಯೂ, ಅನೇಕ ಧಾರ್ಮಿಕ ನಾಯಕರು ಬೆದರಿಕೆಯಾಗಿ, ಅವರು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಮಾತ್ರ ಆಸಕ್ತಿ ಹೊಂದಿದ್ದರು. ಆದರೆ, ಆದಾಗ್ಯೂ, ಕ್ರಿಸ್ತನು ತನ್ನ ತಂದೆಯಾದ ದೇವರ ನಿಯಮಗಳನ್ನು ಮರಣದವರೆಗೂ ಪಾಲಿಸಿದನು. ಯಹೂದಿ ಧಾರ್ಮಿಕ ಮುಖಂಡರು ಯೇಸುವನ್ನು ದೇವರ ಮಗನೆಂದು ಹೇಳಿಕೊಳ್ಳುವುದಕ್ಕಾಗಿ ದೇವಧೂಷಣೆಯನ್ನು ಖಂಡಿಸಿದರು. ಯೇಸುವಿನ ಕೃತ್ಯಗಳಿಂದ ಅವರು ಎಷ್ಟು ಉದ್ರೇಕಗೊಂಡರು ಎಂದರೆ ಅವರು ಅವನನ್ನು ರೋಮನ್ನರ ಬಳಿಗೆ ಕರೆತಂದರು. ಜನರ ಒತ್ತಾಯದ ಮೆರೆಗೆ ರೋಮನ್ ನಾಯಕನಾದ ಪೊಂಟಿಯಸ್ ಪಿಲಾತನು ಯೇಸುವನ್ನು ಶಿಲುಬೆಗೇರಿಸಲು ಶಿಕ್ಷೆ ವಿಧಿಸಿದನು. ಇಬ್ಬರು ಕಳ್ಳರನ್ನು ಸಹ ಯೇಸುವಿನ ಎಡಬಲದಲ್ಲಿ ಶಿಲುಬೆಗೇರಿಸಲಾಯಿತು. ಯೇಸುವನ್ನು ಸಾರ್ವಜನಿಕವಾಗಿ ಥಳಿಸಲಾಯಿತು. ಕಟ್ಟಿಗೆ ಹಿಡಿಕೆ ಇರುವ ಮುಂದುಗಡೆ ಪ್ರಾಣಿಗಳ ಎಲಬು ಸಹಿತ ಕಬ್ಬಿಣದ ಗುಂಡುಗಳ ಚರ್ಮದ ಚಾಟಿಯಿಂದ 39 ಏಟುಗಳನ್ನು ಹೊಡೆಯಲಾಯಿತು. ಇದರಿಂದ ಆತನ ದೆಹದ ಮಾಂಸ ಖಂಡಗಳು ಕಿತ್ತು ಬರುತಿದ್ದವು. ರಕ್ತ ಧಾರಕಾರವಾಗಿ ಹರಿಯುತಿತ್ತು. ಜನಸಾಮಾನ್ಯ ನೋಡುಗರ ಹೃದಯ ಕಣ್ಣೀರು ಸುರಿಸುತಿತ್ತು. ಸ್ತ್ರೀಯರು ಗೋಳಾಡುತಿದ್ದರು. ಆಗ ಯೇಸು ಎಲ್ಲವನ್ನು ಸಹಿಸಿಕೊಳ್ಳುತ್ತ ನನಗಾಗಿ ಅಳಬೇಡಿ ನಿಮ್ಮ ಮಕ್ಕಳಿಗಾಗಿ ಅಳಿರಿ ಎಂದು ಸಮಾಧಾ ಪಡಿಸುವ ದಯಾಸಾಗರವಾಗಿದ್ದರು. ಅವನ ಜರ್ಜರಿತ ಸ್ಥಿತಿಯಲ್ಲಿ, ಜೀಸಸ್ ಬೀದಿಗಳಲ್ಲಿ ಭಾರೀ ಮರದ ಶಿಲುಬೆಯನ್ನು ಗೇಲಿ ಮಾಡುವ ಗುಂಪಿನ ನಡುವೆ ಸಾಗಿಸಲು ಒತ್ತಾಯಿಸಲಾಯಿತು. ಅವನ ಮುಖದ ಮೇಲೆ ಉಗುಳಿದರು. ಆತನ ಬಟ್ಟೆಗಾಗಿ ಚಿಟು ಹಾಕಿದರು. ಅಂತಿಮವಾಗಿ, ಅವನ ಮಣಿಕಟ್ಟು ಮತ್ತು ಪಾದಗಳಿಂದ ಶಿಲುಬೆಗೆ ಹೊಡೆಯಲಾಯಿತು. ಮನುಷ್ಯ ಕುಮಾರನ ರೂಪದಲ್ಲಿದ್ದ ಪಿತ ಪರಮೇಶ್ವರನ ಏಕೈಕ ಸುತ ದೇವಕುಮಾರನಾದ ಯೇಸು ತನ್ನ 33ನೆ ತುಂಬು ಯೌವನದ ದಿನಗಳಲ್ಲಿ ಸಾಯುವವರೆಗೂ ಶಿಲುಬೆಯಲ್ಲಿ ನೇತಾಡುತ್ತಿದ್ದರು.
ಶಿಲುಬೆಯ ಮೇಲೆ ಯೇಸು ಪ್ರಭು ನುಡಿದ ಏಳು ಕೊನೆಯ ನುಡಿ ತೋರಣಗಳು
- ಮೊದಲ ಪದ “ತಂದೆಯೇ, ಅವರನ್ನು ಕ್ಷಮಿಸು, ಅವರು (ತಾವು) ಏನು ಮಾಡುತ್ತೆವೆ ಎಂಬುದನ್ನು ಅರಿತರು.”
-ಲೂಕ 23:34 - ಎರಡನೇ ಪದ
“ಕ್ಷೆಮೆಯನ್ನು ಕೇಳಿದ ಕಳ್ಳನಿಗೆ ಯೇಸು, “ಈ ಹೊತ್ತೆ ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದನು.
-ಲೂಕ 23:43 - ಮೂರನೇ ಪದ “ಯೇಸು ತನ್ನ ತಾಯಿಯನ್ನು ಹತ್ತಿರದಲ್ಲಿ ನಿಂತಿದ್ದ ತನ್ನ ಶಿಷ್ಯನನ್ನು ನೋಡಿ ತಾಯಿಗೆ “ಅಮ್ಮ ಇಗೋ ನಿನ್ನ ಮಗನು ಎಂದು ಹೇಳಿದನು.; ತರುವಾಯ ಆ ಶಿಷ್ಯನಿಗೆ ಇಗೋ ನಿನ್ನ ತಾಯಿ” ಎಂದು ಹೇಳುದನು.
-ಜಾನ್ 19: 26 – 27.
- ನಾಲ್ಕನೇ ಪದ
ಸುಮಾರು 3 ಗಂಟೆಗೆ “ಏಲೀ, ಏಲೀ, ಲಮಾ ಸಬಕ್ತಾನಿ?” ಅಂದರೆ, “ನನ್ನ ದೇವರೇ, ನನ್ನ ದೇವರೇ, ನೀನು ನನ್ನನ್ನು ಏಕೆ ಕೈಬಿಟ್ಟಿದ್ದೀ?” -ಮತ್ತಾ 27:46. - ಐದನೇ ಪದ ಶಾಸ್ತ್ರದ ಮಾತು ನೆರೆವೇರುವಂತೆ “ನನಗೆ ನೀರಡಿಕೆ (ಬಾಯಾರಿಕೆ) ಆಗಿದೆ” ಅಂದನು.” ಯೋಹಾನ 19:28.
- ಆರನೇ ಪದ “ಇದು ಪೂರ್ಣಗೊಂಡಿದೆ ಅಂದರೆ “ತೀರಿತು” ಎಂದು ಹೇಳಿ ತಲೇ ಬಾಗಿಸಿ ಆತ್ಮವನ್ನು ಒಪ್ಪಸಿಕೊಟ್ಟನು.
- ಯೋಹಾನ 19:30.
- ಏಳನೇ ಪದ ಆಮೇಲೆ ಯೇಸು
“ತಂದೆಯೇ, ನಿನ್ನ ಕೈಯಲ್ಲಿ ನಾನು ನನ್ನ ಆತ್ಮವನ್ನು ಒಪ್ಪಿಸಿಕೊಡುತ್ತೇನೆ.” ಎಂದು ಮಹಾಧ್ವನಿಯಿಂದ ಕೂಗಿದನು; ಇದನ್ನು ಹೆಳಿದ ಮೇಲೆ ಪ್ರಾಣ ಬಿಟ್ಟನು -ಲೂಕ 23:46
*ಮಾನವ ಕುಲಕೋಟಿ ರಕ್ಷಣೆಗಾಗಿ ಮೆಸ್ಸಿಯಾ ಯೇಸು ಕ್ರಿಸ್ತನು ಸಹಿಸಿಕೊಂಡ ಸಂಕಟಗಳ ಮಾಹಿತಿ..
JEW ಕ್ಯಾಲೆಂಡರ್ ಪ್ರಕಾರ …
350 ಸೈನಿಕರು ಮತ್ತು 50 ಕುದುರೆ ಸವಾರರು ಜೆರುಸಲೇಮಿನ ಬೀದಿಗಳಲ್ಲಿ ಯೇಸುವನ್ನು ಚಾವಟಿಯಿಂದ ಎಳೆದುಕೊಂಡು ಹೋದರು …
ಯೇಸು ಸ್ವಾಮಿ ಎತ್ತರ 5.11 ಇಂಚು ಇತ್ತು,
ತೂಕ: 85 ಕೆ. ಜಿ ಇತ್ತು. ಉಗುರಗಳ ದಪ್ಪ 3/4 ಸೆಂಟಿಮೀಟರ್ ಮತ್ತು ಉದ್ದ 8 ಸೆಂಟಿ ಮೀಟರ್, ಯೇಸು ತನ್ನ ಶಿಲುಬೆಯನ್ನು ಗೊಲ್ಗೊಥಾಗೆ ಸಾಗಿಸುವಾಗ ಎಡವಿ 3 ಬಾರಿ ನೆಲಕ್ಕೆ ಬಿದ್ದನು. ಯೇಸುವಿಗೆ ತುಂಬಾ ಬಾಯಾರಿಕೆಯಾಯಿತು ಮತ್ತು 17 ಗಂಟೆಗಳ ಕಾಲ ನೀರಿಗಾಗಿ ಹಾತೊರೆಯುತ್ತಿದ್ದನು. ಯೇಸುವಿನ ದೇಹದಲ್ಲಿ 5480 ಗಾಯಗಳಿದ್ದವು. ಅವನ ಬೆನ್ನಿನ ಮೇಲೆ ಮಾತ್ರ 150 ಆಳವಾದ ಗಾಯಗಳಿದ್ದವು. 17 ಮುಳ್ಳುಗಳುಳ್ಳ ಕಿರೀಟವನ್ನು ಯೇಸುವಿನ ತಲೆಗೆ ಹಾಕಿದರು (ಚುಚ್ಚಿದರು). ಜೀಸಸ್ ಶೆಡ್ 6.5 ಲೀಟರ್ ರಕ್ತ ಸುರಿಯಿತು. ಮಾನವರಾದ ನಮ್ಮ ದ್ರೋಹಗಳ ನಿಮಿತ್ತ ಮಹಾ ಪ್ರಭಾವಶಾಲಿಯಾದ ದೇವರು ನರಕಯಾತನೆ ಸಹಿಸಿದನು. ನಮಗೆ ನಿತ್ಯಜೀವಕ್ಕೆ ಭಾದ್ಯರಾಗಿ ಮಾಡಿದನು.
ಯೇಸು ಸ್ವಾಮಿ ತೂಗಿದ ಶಿಲುಬೆಯ ತೂಕ, ಆಕಾರ, ಗಾತ್ರ, ಸಮಯದ ವಿಶೇಷತೆ
ಪೂರಾ ಶಿಲುಬೆ ಒಂದು ಘನ ಕಟುವಾದ ಮರದಿಂದ ತಯಾರಾಗಿದ್ದೆಂದು ನಂಬಲಾಗುತ್ತದೆ. ಈ ಶಿಲುಬೆಯ ಒಟ್ಟು ತೂಕ ಸುಮಾರು 300 ಪೌಂಡ್ (136/15೦ ಕಿಲೋಗ್ರಾಂ) ಆಗಿರಬಹುದು. ಉದ್ದ 15 ಅಡಿ, ಅಗಲ 8 ಅಡಿ, ಅದರ ಕೆರೆಬಿಲ್ಲು (ಕ್ಯಾಂಡಿಬಾರಿನಂತೆ ಕಾಣುವ ಭಾಗ) ಸುಮಾರು 70 ರಿಂದ 90 ಪೌಂಡ್ (32–41 ಕಿಲೋಗ್ರಾಂ) ಇತ್ತು ಎಂದು ಅಂದಾಜಿಸಲಾಗಿದೆ. ಅಷ್ಟು ಪೀಡೆಯ ನಂತರ, ಕೇವಲ ಆ ಕೆರೆಬಿಲ್ಲನ್ನೂ ಯೇಸು ಕ್ರಿಸ್ತನು ಎತ್ತುವುದು ತುಂಬಾ ಕಷ್ಟಕರವಾಗಿತ್ತು. ಯೇಸು ಕ್ರೂಜೆ ಹೊತ್ತು 5 ಕೀಲೊ ಮೀಟರ್ ನಡೆದನು. ಯೇಸುಕ್ರಿಸ್ತನು ಶಿಲುಬೆ ಮೇಲೆ ಸುಮಾರು ಆರು ಗಂಟೆಗಳ ಕಾಲ ತೂಗಿದರೂ, ಇದ್ದರೆಂದು ಹೇಳಲಾಗುತ್ತದೆ, ಇದು ಮಾರ್ಕನ ಸುವಾರ್ತೆಯ ಪ್ರಕಾರ ಪಾಶ್ಚಾತ್ಯ ಸಮಯ ಮೂರನೇ ಘಂಟೆಯಿಂದ (ಬೆಳಿಗ್ಗೆ 9 ಗಂಟೆ) ಒಂಬತ್ತನೇ ಘಂಟೆ (ಮಧ್ಯಾಹ್ನ 3 ಗಂಟೆ) ವರೆಗೆ ಆಗಿತ್ತು. ಈ ವಿವರಕ್ಕೆ ಮತ್ತಾಯ ಮತ್ತು ಲೂಕನ ಸುವಾರ್ತೆಗಳೂ ಸಹ ಬೆಂಬಲ ನೀಡುತ್ತವೆ.
ನಿಷ್ಕಳಂಕ ಪ್ರಭು ಯೇಸು ಸ್ವಾಮಿಗೆ ಜಡಿದ ಮೊಳೆಗಳ ಗಾತ್ರ ಮತ್ತು ಮಹತ್ವ – ವಿಶೇಷತೆ
ಯೇಸುವನ್ನು ಶಿಲುಬೆಗೇರಿಸಲು ಬಳಸಲಾದ ಮೊಳೆಗಳ ನಿಖರ ಸಂಖ್ಯೆಯನ್ನು ಸುವಾರ್ತೆಗಳು ಅಥವಾ ಇತರ ಐತಿಹಾಸಿಕ ವೃತ್ತಾಂತಗಳಲ್ಲಿ ಖಚಿತವಾಗಿ ಹೇಳಲಾಗಿಲ್ಲ. ಆದಾಗ್ಯೂ, ಹೆಚ್ಚಿನ ಚಿತ್ರಣಗಳು ಮತ್ತು ಸಂಪ್ರದಾಯಗಳು ಅವನನ್ನು ಮೂರು ಮೊಳೆಗಳಿಂದ ಶಿಲುಬೆಗೇರಿಸಲಾಯಿತು ಎಂದು ಸೂಚಿಸುತ್ತವೆ, ಅವನ ಮಣಿಕಟ್ಟುಗಳಲ್ಲಿ ಎರಡು ಮತ್ತು ಅವನ ಪಾದಗಳಲ್ಲಿ ಎರಡು ಮೊಳೆ ಜಡಿದರೆಂದು ಹೇಳಲಾಗಿದೆ. ಯೇಸುವಿನ ಪಾದಗಳನ್ನು ಒಂದರ ಮೇಲೊಂದರಂತೆ ಇರಿಸಿ ಒಂದೇ ಮೊಳೆಯಿಂದ ಜಡಿದರೆಂದು ಕೆಲವು ಕ್ರಿಶ್ಚಿಯನ್ನರು ನಂಬುವುದುಂಟು. ಕೇವಲ ಮೂರು ಮೊಳೆಗಳನ್ನು ಮಾತ್ರ ಬಳಸಲಾಗಿದೆ ಎಂದು ನಂಬುವ ಸಂಪ್ರದಾಯವೂ ಇದೆ, ಆದರೆ ಇದು ವ್ಯಾಪಕವಾಗಿ ನಂಬಲಾದ ಸಿದ್ಧಾಂತವಲ್ಲ. ಇದರ ಜೊತೆಗೆ ಶಿಲುಬೆಗೇರಿಸುವಿಕೆಯ ಮೊಳೆಗಳು ಸರಿಸುಮಾರು 7 ಇಂಚು ಉದ್ದ ಮತ್ತು ಸುಮಾರು 3/8 ಇಂಚು ವ್ಯಾಸವನ್ನು ಹೊಂದಿದ್ದವು ಮತ್ತು ಮಣಿಕಟ್ಟುಗಳ ಮೂಲಕ ಹೊಡೆಸಲ್ಪಟ್ಟವು. ಬಿಂದುಗಳು ಮಧ್ಯದ ನರದ ಸಮೀಪಕ್ಕೆ ಹೋಗುತ್ತವೆ, ಇದರಿಂದಾಗಿ ತೋಳುಗಳ ಮೂಲಕ ನೋವಿನ ಆಘಾತಗಳು ಹೊರಹೊಮ್ಮಿತು. ಮೊಳೆಗಳು’ ಸುಮಾರು 13 ರಿಂದ 18 ಸೆಂ.ಮೀ (5 ರಿಂದ 7 ಇಂಚು) ಉದ್ದದ ಮೊನಚಾದ ಕಬ್ಬಿಣದ ಸ್ಪೈಕ್‌ಗಳಾಗಿದ್ದು, 10 ಮಿಲಿಮೀಟರ್ (3/8 ಇಂಚು) ಅಗಲದ ಚೌಕಾಕಾರದ ದಂಡವನ್ನು ಹೊಂದಿದ್ದವು. ಶಿಲುಬೆಯ ಮೇಲೆ ನೇತಾಡುವಾಗ ವ್ಯಕ್ತಿಯ ಹೆಸರು ಮತ್ತು ಅಪರಾಧವನ್ನು ನೋಡುಗರಿಗೆ ತಿಳಿಸಲು ಶಿಲುಬೆಗೆ INRI (ಇವನು ಯೆಹೂದ್ಯರ ಅರಸ) ಎಂಬ ಟೈಟಲ್ ಇರುವ ಫಲಕವನ್ನು ಸಹ ಜೋಡಿಸಲಾಗಿತ್ತು. ಇದು ಸಾರ್ವಜನಿಕ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸಿತು. ಮೊದಲ ಮೊಳೆ ಪಾಪಗಳ ಕ್ಷಮೆಯನ್ನು ಸಂಕೇತಿಸುತ್ತದೆ, ಎರಡನೇ ಮೊಳೆ ದೇವರು ಮತ್ತು ಮಾನವೀಯತೆಯ ನಡುವಿನ ಸಮನ್ವಯವನ್ನು ಪ್ರತಿನಿಧಿಸುತ್ತದೆ ಮತ್ತು ಮೂರನೇ ಮೊಳೆ ಮಾನವಕುಲ ಮತ್ತು ದೈವಿಕ ನಡುವಿನ ಮುರಿದ ಸಂಬಂಧದ ಪುನಃಸ್ಥಾಪನೆಯನ್ನು ಸೂಚಿಸುತ್ತದೆ. “ಮೂರು ಮೊಳೆಗಳು ಮತ್ತು ಶಿಲುಬೆ”ಯ ಚಿತ್ರಣವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಹ ಸಾಕಾರಗೊಳಿಸುತ್ತದೆ. ಈ ಲೇಖನದ ಕೆಲಭಾಗ ಯುಕೆಯಲ್ಲಿರುವ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಸಂಶೋಧನೆ ಆಧಾರಿತವಾಗಿದೆ. ಅಗೋ ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು ಎಂಬುದಾಗಿ ಹೋಹಾನ 1:29 ರಲ್ಲಿ ಬರೆದಿರುವುದು ಪ್ರಾಮಾಣಿಕೃತವಾಗಿದೆ. ಹಾಗಾಗಿ ಶಾಸ್ತ್ರೋಕ್ತಿ ನೆರವೇರುವಂತೆ ಆತನು ಮನುಷ್ಯರ ಪಾಪ ನಿವಾರಣೆಗೆ ತನ್ನ ಜೀವವನ್ನೇ ನೀಡಿದನು.
ಅತ್ಮಸ್ವರೂಪಿ ಯೇಸುಸ್ವಾಮಿ ಪ್ರಾಣಾರ್ಪಣೆ ಮಾಡಿದಾಗ ಸಂಭವಿಸಿದ ಪ್ರಸಂಗಗಳು
ಹಗಲು ಹೊತಗತಿನಲ್ಲೇ ಕತ್ತಲು ಕವಿಯಿತು, ದೇವಾಲಯದ ಪರದೆ ಹರಿಯಿತು, ಬಂಡೆಸೀಳಿತು, ಭೂಮಿಯು ಅದರಿತು, ಸಮಾಧಿಗಳು ತೆರೆದವು, ಶತಾದಿಪತಿಯಾದಿಯಾಗಿ ಅನೇಕರು ಯೇಸುವೇ ನಿಜವಾದ ದೇವ ಕುಮಾರ ಎಂದು ನಂಬಿದರು. ಆತನು (ಯೇಸುಸ್ವಾಮಿ) ನಮ್ಮ ಪಾಪಗಳನ್ನು ನಿವಾರಣೆಮಾಡುವ ಯಜ್ಞವಾಗಿದ್ದಾನೆ ನಮ್ಮ ಪಾಪಗಳನ್ನ ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನು ಸಹ ನಿರ್ನಾಮ ಮಾಡುತ್ತಾನೆ. ಎಂದು 1 ಯೋಹಾನ 2:2 ರಲ್ಲಿ ಬರೆಯಲಾಗಿದೆ. ಈ ಶುಭ ಶುಕ್ರವಾರದ ಶುಭ ಗಳಿಗೆಯಂದು ದೇವರ ಕೃಪೆಯ ಪ್ರಭೆಯಲ್ಲಿ ಎಲ್ಲರ ಬಾಳು ಬೆಳಗಲಿ.

ಸುಭಾಷ್ ಹೇಮಣ್ಣಾ ಚವ್ಹಾಣ,
ಪರಮವಾಡಿ ತಾಂಡೆ, ಯಲವಿಗಿ ಅಂಚೆ,
ಸವಣೂರು ತಾ. ಹಾವೇರಿ ಜಿ.