ಗ್ಲಾಸ್ಗೋ : 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಅಧಿಕೃತ ಉದ್ಘಾಟನೆಗೂ ಮುನ್ನವೇ ಭಾರತ ತನ್ನ ಮೊದಲ ಪದಕವನ್ನು ಖಚಿತಪಡಿಸಿಕೊಂಡಿದೆ. ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ‘ಬೈ’ ಪಡೆದು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಈ ವಿಭಾಗದಲ್ಲಿ ಕೇವಲ ಐವರು ಸ್ಪರ್ಧಿಗಳು ಇದ್ದ ಕಾರಣ ಒಬ್ಬರಿಗೆ ನೇರವಾಗಿ ಸೆಮಿಫೈನಲ್ ಪ್ರವೇಶದ ಅವಕಾಶ ಲಭಿಸಿತ್ತು. ಲವ್ಲಿನಾ ಅವರಿಗೆ ಈ ಅವಕಾಶ ದೊರೆತಿದ್ದು, ಬಾಕ್ಸಿಂಗ್ ನಿಯಮಾವಳಿಗಳ ಪ್ರಕಾರ ಸೆಮಿಫೈನಲ್ ಪ್ರವೇಶಿಸಿದ ಎಲ್ಲ ಸ್ಪರ್ಧಿಗಳಿಗೂ ಕನಿಷ್ಠ ಕಂಚಿನ ಪದಕ ಖಚಿತವಾಗುತ್ತದೆ. ಹೀಗಾಗಿ ಭಾರತವು ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ತನ್ನ ಪದಕ ಖಾತೆ ತೆರೆದಂತಾಗಿದೆ.
ಲವ್ಲಿನಾ ಅವರು ಜುಲೈ 31ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಟುವಾಲು ದೇಶದ ಟಿಕೆಬಿಪಿ ಟಾಫಕಿ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಫೈನಲ್ ಪ್ರವೇಶಿಸಿ ಚಿನ್ನ ಅಥವಾ ಬೆಳ್ಳಿ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಸೋತರೂ ಕಂಚಿನ ಪದಕ ಅವರ ಪಾಲಾಗಲಿದೆ.
ಹಲವು ಕ್ರೀಡೆಗಳನ್ನು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಕೈಬಿಡಲಾಗಿದ್ದರೂ, 124 ಕ್ರೀಡಾಪಟುಗಳ ಭಾರತೀಯ ತಂಡಕ್ಕೆ ಲವ್ಲಿನಾ ಅವರ ಈ ಸಾಧನೆ ಆರಂಭದಲ್ಲೇ ದೊಡ್ಡ ಉತ್ತೇಜನ ನೀಡಿದೆ.

