‘
ಕೋಟ: ಇಪ್ಪತ್ತು ವರ್ಷಗಳ ಹಿಂದೆ ಕೋಟದ ವಿವೇಕ ಬಾಲಕರ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ 2002ನೇ ಸಾಲಿನ ವಿದ್ಯಾರ್ಥಿಗಳು ರಚಿಸಿಕೊಂಡಿರುವ ‘ವಿವೇಕ ಹೈಸ್ಕೂಲ್ ಬಳಗ-2002’ ವಾಟ್ಸಪ್ ಗ್ರೂಪ್ ವತಿಯಿಂದ ಪ್ರತಿವರ್ಷ ಶಿಕ್ಷಕರ ದಿನಾಚರಣೆಯ ಅಂಗವಾಗಿ ‘ನಮ್ಮ ಮಾಷ್ಟ್ರು’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ಅಭಿಯಾನದಡಿ ಶಾಲೆಯಲ್ಲಿ ತಮಗೆ ಬೋಧಿಸಿದ ಹಾಗೂ ನಿವೃತ್ತರಾಗಿರುವ ಶಿಕ್ಷಕರ ಮನೆಗೆ ತೆರಳಿ ಕುಶಲೋಪರಿ ವಿಚಾರಿಸಿ, ತಮ್ಮ ವೃತ್ತಿ ಪರಿಚಯಿಸಿಕೊಂಡು ಗುರುವಂದನೆ ಸಲ್ಲಿಸುವ ಮೂಲಕ ಶಿಕ್ಷಕರನ್ನು ಗೌರವಿಸಲಾಗುತ್ತಿದೆ.
ಈ ಬಾರಿ ಬಳಗದ ಸದಸ್ಯರು ತಮಗೆ ಗಣಿತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕ ಶ್ರೀಕಾಂತ ಅಧಿಕಾರಿ ಅವರ ಮನೆಗೆ ತೆರಳಿ ಗೌರವ ಸಲ್ಲಿಸಿದರು. ಗ್ರೂಪ್‌ನ ಪುರೋಹಿತ ಮಿತ್ರರ ಮಂತ್ರಘೋಷದೊಂದಿಗೆ ಶಿಕ್ಷಕರಿಗೆ ಶಾಲು ಹೊದಿಸಿ, ಫಲವಸ್ತು ಹಾಗೂ ಸ್ಮರಣಿಕೆಯನ್ನು ನೀಡಿ ಗುರುವಂದನೆ ಸಲ್ಲಿಸಲಾಯಿತು. ಬಳಿಕ ಶಿಕ್ಷಕರ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶ್ರೀಕಾಂತ ಅಧಿಕಾರಿ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಹೈಸ್ಕೂಲ್ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ತಾವು ಶಾಲಾ ದಿನಗಳಲ್ಲಿ ಮಾಡಿದ ತಮಾಷೆಗಳು, ಶಿಕ್ಷಕರಿಂದ ಪೆಟ್ಟು ತಿಂದ ಪ್ರಸಂಗಗಳು ಸೇರಿದಂತೆ ಹಳೆಯ ನೆನಪುಗಳನ್ನು ಹಂಚಿಕೊಂಡು ಸಂತಸಪಟ್ಟರು.
ಕಾರ್ಯಕ್ರಮದಲ್ಲಿ ಗ್ರೂಪ್‌ನ ವೆಂಕಟೇಶ್ ಐತಾಳ್, ರಾಮಕೃಷ್ಣ ಕೆದಿಲಾಯ, ನಾಗೇಶ್ ಸೋಮಯಾಜಿ, ಪ್ರಸನ್ನ ಭಟ್, ರಾಜೇಶ್ ಆಚಾರ್ಯ, ಪ್ರವೀಣ್ ಆಚಾರ್ಯ, ಪ್ರವೀಣ್ ಶೆಟ್ಟಿ, ಗುರುರಾಜ್ ಆಚಾರ್ಯ, ಸುಬ್ರಹ್ಮಣ್ಯ ಸೋಮಯಾಜಿ, ರೋಹಿತಾಕ್ಷ ಉಪಾಧ್ಯ, ರಿತೇಶ್ ಕಾಮತ್ ಹಾಗೂ ಸುಧೀಂದ್ರ ಆಚಾರ್ಯ ಉಪಸ್ಥಿತರಿದ್ದರು.
ಪ್ರವೀಣ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣ ಕೆದಿಲಾಯ ವಂದಿಸಿದರು.

