Saturday, June 14, 2025
HomeUncategorizedಒಂದೇ ಜಾತಿ ಒಂದೇ ಮತ ಒಂದೇ ದೇವರು' ಎಂಬ ಗುರುವಾಣಿ ಸರ್ವಕಾಲಿಕ ಸತ್ಯ: ಕೆ.ದಿವಾಕರ ಶೆಟ್ಟಿ...

ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ಗುರುವಾಣಿ ಸರ್ವಕಾಲಿಕ ಸತ್ಯ: ಕೆ.ದಿವಾಕರ ಶೆಟ್ಟಿ ತೋಟದಮನೆ

ಮೂಡುಬೆಟ್ಟು-ಮಧ್ವನಗರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಶಿಲಾನ್ಯಾಸ

ಸಮಾಜದಲ್ಲಿರುವ ಅಸ್ಪೃಶ್ಯತೆ, ಅಸಮಾನತೆಯನ್ನು ತೊಡೆದುಹಾಕಿ ಸಂಘಟಿತ ಸಮಾಜ ನಿರ್ಮಾಣಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳು ನಾಡಿಗೆ ನೀಡಿದ ‘ಒಂದೇ ಜಾತಿ ಒಂದೇ ಮತ ಒಂದೇ ದೇವರು’ ಎಂಬ ತತ್ವ ಸಂದೇಶ ಸರ್ವಕಾಲಿಕ ಸತ್ಯವಾಗಿದೆ. ಈ ನಿಟ್ಟಿನಲ್ಲಿ ಕೊಡವೂರು ಗ್ರಾಮದ ಮೂಡುಬೆಟ್ಟು-ಮಧ್ವನಗರದಲ್ಲಿ ಎಲ್ಲರ ಒಗ್ಗೂಡುವಿಕೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ ನಾಂದಿ ಹಾಡಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಕೊಡವೂರು ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಕೆ.ದಿವಾಕರ ಶೆಟ್ಟಿ ತೋಟದಮನೆ ಹೇಳಿದರು.

ಅವರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ(ರಿ.) ಮೂಡುಬೆಟ್ಟು-ಮಧ್ವನಗರ ಇದರ ವತಿಯಿಂದ ಮೂಡುಬೆಟ್ಟು ಶ್ರೀ ನಾಗದೇವರ ಸನ್ನಿದಿಯ ಬಳಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಶಿಲಾನ್ಯಾಸವನ್ನು ನೆರವೇರಿಸಿ, ಧಾರ್ಮಿಕ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಎಲ್ಲರ ಸಂಘಟಿತ ಪರಿಶ್ರಮದಿಂದ ಅಸ್ತಿತ್ವಕ್ಕೆ ಬಂದಿರುವ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ(ರಿ.) ಸಂಘಟನೆಯ ಈ ಶೃದ್ದಾ ಕೇಂದ್ರದಲ್ಲಿ ಶ್ರೀ ಗುರುವರ್ಯರ ಕೃಪಾಕಟಾಕ್ಷದಿಂದ ಒಂದು ವರ್ಷದೊಳಗೆ ಭವ್ಯವಾದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರವು ನಿರ್ಮಾಣಗೊಳ್ಳುವರೆ ಸಂಪೂರ್ಣ ಸಹಕಾರ ನೀಡಲು ಬದ್ದನಿದ್ದೇನೆ ಎಂದು ಅವರು ತಿಳಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್ ಮಾತನಾಡಿ ದೇವಸ್ಥಾನ, ದೈವಸ್ಥಾನ, ಮಠ-ಮಂದಿರಗಳ ತವರೂರು ಎನಿಸಿರುವ ಕೊಡವೂರು ಕ್ಷೇತ್ರದಲ್ಲಿ ‘ಸಂಘಟನೆಯಿಂದ ಬಲಯುತರಾಗಿರಿ, ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ’ ಎಂಬ ದಿವ್ಯ ವಾಣಿಯನ್ನು ನಾಡಿಗೆ ನೀಡಿದ ಬ್ರಹ್ಮಶ್ರೀ ನಾರಾಯಣಗಳ ಗುರು ಮಂದಿರವೂ ನಿರ್ಮಾಣಗೊಳ್ಳುತ್ತಿರುವುದು ಯೋಗಾಯೋಗವಾಗಿದೆ. ಅತೀ ಶೀಘ್ರವಾಗಿ ಸುಂದರವಾದ ಶ್ರೀ ಗುರು ಮಂದಿರ ನಿರ್ಮಾಣಗೊಂಡು ಸಮಾಜಮುಖಿ ಸೇವೆಗೆ ಅರ್ಪಣೆಗೊಳ್ಳುವಂತಾಗಲಿ ಎಂದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ(ರಿ.) ಮೂಡುಬೆಟ್ಟು-ಮಧ್ವನಗರ ಅಧ್ಯಕ್ಷ ಮಧ್ವನಗರ ಶಂಕರ ಪೂಜಾರಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಅಮೃತ ವಾಣಿಯಂತೆ ವಿವಿಧ ಸಮಾಜ ಭಾಂದವರನ್ನು ಒಗ್ಗೂಡಿಸಿ ರಚಿಸಿರುವ ಸೇವಾ ಸಮಿತಿಯ ಮೂಲಕ ಅನೇಕ ದಾನಿಗಳ ನೆರವಿನೊಂದಿಗೆ ಖರೀದಿಸಿರುವ ಸ್ಥಿರಾಸ್ತಿಯಲ್ಲಿ ಭವ್ಯ ಶ್ರೀ ಗುರು ಮಂದಿರ ನಿರ್ಮಾಣಗೊಳ್ಳಬೇಕು ಎಂಬ ಕನಸನ್ನು ನನಸಾಗಿಸಲು ಸ್ವಇಚ್ಛೆಯಿಂದ ಮಂದಿರದ ಸಂಪೂರ್ಣ ವೆಚ್ಚವನ್ನು ಭರಿಸಲು ಕೈಜೋಡಿಸಿರುವ ಕೊಡವೂರು ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ತೋಟದಮನೆ ಕೆ.ದಿವಾಕರ ಶೆಟ್ಟಿ ಅವರ ಸೇವಾ ಮನೋಭಾವಕ್ಕೆ ಸಮಿತಿಯು ಅಭಾರಿಯಾಗಿದೆ. ಶ್ರೀ ಗುರು ಮಂದಿರ ನಿರ್ಮಾಣದ ಜೊತೆಗೆ ಸಮಿತಿಯ ಮುಂದಿನ ಎಲ್ಲಾ ಸೇವಾ ಕಾರ್ಯ ಚಟುವಟಿಕೆಗಳಿಗೆ ಸರ್ವರ ಅತ್ಯಮೂಲ್ಯ ಸಹಕಾರ, ಬೆಂಬಲ ಅತೀ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯರಾದ ಶ್ರೀಶ ಭಟ್, ವಿಜಯ ಕೊಡವೂರು, ಕಲಾ ಜಗತ್ತು ಮುಂಬೈ ಸಂಸ್ಥಾಪಕ ವಿಜಯ ಕುಮಾರ್ ಶೆಟ್ಟಿ, ಕಂಗನಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಅರ್ಚಕ ಜಗದೀಶ್ ಶೆಟ್ಟಿ, ಬಿಲ್ಲವರ ಸೇವಾ ಸಂಘ(ರಿ.) ಮುನಿಯಾಲು ಅಧ್ಯಕ್ಷ ಎಸ್.ಟಿ. ಕುಂದರ್, ಬಿಲ್ಲವರ ಸೇವಾ ಸಂಘ(ರಿ.) ಬನ್ನಂಜೆ-ಉಡುಪಿ ಅಧ್ಯಕ್ಷ ಮಾಧವ ಬನ್ನಂಜೆ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಮಾಜಿ ನಗರಸಭಾ ಸದಸ್ಯ ರವಿ ಅಮೀನ್ ಬನ್ನಂಜೆ, ಶ್ರೀ ರಾಮ ಕ್ಷೇತ್ರ ಐಟಿಐ ತಾಂತ್ರಿಕ ವಿದ್ಯಾಲಯ ಬಿಲ್ಲಾಡಿ ಅಧ್ಯಕ್ಷ ಓಬು ಪೂಜಾರಿ ಪಂದುಬೆಟ್ಟು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ.) ಜಿಲ್ಲಾಧ್ಯಕ್ಷ ಪ್ರವೀಣ್ ಎಮ್. ಪೂಜಾರಿ, ಜಿಲ್ಲಾ ಸಂಚಾಲಕ ರಘುನಾಥ್ ಮಾಬಿಯಾನ್, ಭಗವತಿ ತೀಯಾ ಸಮಾಜ ಮೂಡುಬೆಟ್ಟು ಅಧ್ಯಕ್ಷ ಶಂಕರ ಬೆಲ್ಚಡ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ಸಂಜೀವ ಸುವರ್ಣ ಸಹಿತ ಪದಾಧಿಕಾರಿಗಳು, ಸಮಿತಿ ಸದಸ್ಯರು, ಸ್ಥಳೀಯ ಪ್ರಮುಖರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ರಮೇಶ್ ಶೆಟ್ಟಿ ಮೂಡುಬೆಟ್ಟು ಕಾರ್ಯಕ್ರಮ ನಿರೂಪಿಸಿ, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸು ಸನಿಲ್ ವಂದಿಸಿದರು.

ಸಭಾ ವೇದಿಕೆಯಲ್ಲಿ ಮಹಿಳಾ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಪರಿಸರದ ಶ್ರೀ ನಾಗ ದೇವರ ಸನ್ನಿದಿಯಲ್ಲಿ ವಾರ್ಷಿಕ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

RELATED ARTICLES
- Advertisment -
Google search engine

Most Popular