ಯುವತಿಯ ವಿಚಾರಕ್ಕೆ ಕಿರುಕುಳ?: ಆಡಿಯೋ ರೆಕಾರ್ಡ್ ಮಾಡಿ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

0
51

ಹಾಸನ : ಹೊಳೆನರಸೀಪುರ ತಾಲೂಕಿನ ಯುವಕನೋರ್ವ ಯುವತಿಯ ವಿಚಾರವಾಗಿ ಉಂಟಾದ ಮನಸ್ತಾಪ ಹಾಗೂ ನಿರಂತರ ಕಿರುಕುಳಕ್ಕೆ ಬೇಸತ್ತು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ತಾಲೂಕಿನ ಮಾಕವಳ್ಳಿ ಗ್ರಾಮದ ಅಭಿಷೇಕ್ (26) ಮೃತ ಯುವಕ ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಡೆತ್‌ನೋಟ್ ಮಾದರಿಯ ಆಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. “ನನ್ನ ಸಾವಿಗೆ ಶಂಕರ, ದರ್ಶನ್, ಚೇತನ್ ಮತ್ತು ದಿನೇಶ್ ನೇರ ಕಾರಣ. ಯುವತಿಯೊಬ್ಬಳ ವಿಚಾರದಲ್ಲಿ ಇವರು ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಕಿರುಕುಳದಿಂದ ಮನನೊಂದಿದ್ದ ಅಭಿಷೇಕ್ ಭಾನುವಾರ ಸಂಜೆ ಕಡುವಿನಕೋಟೆ ಗ್ರಾಮದ ಸಮೀಪದ ರೈಲ್ವೆ ಹಳಿಯ ಬಳಿ ತೆರಳಿ, ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಮೃತ ಯುವಕ ರೆಕಾರ್ಡ್ ಮಾಡಿದ್ದ ಆಡಿಯೋ ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದು, ಅದನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಆಡಿಯೋದಲ್ಲಿ ಹೆಸರಿಸಲಾದ ಶಂಕರ, ದರ್ಶನ್, ಚೇತನ್ ಹಾಗೂ ದಿನೇಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here