ಮೂಡುಬಿದಿರೆ : ಲೇಖಕ ಮೋಹನ್ ಹೊಸ್ಮಾರ್ (ಕಾವ್ಯನಾಮ: ಅಕ್ಷರ ಜೋಳಿಗೆ) ಅವರ ಚೊಚ್ಚಲ ಕವನ ಸಂಕಲನ ‘ಹಸಿ ನೆನಪುಗಳ ಜೋಳಿಗೆ’ ಪುಸ್ತಕ ಬಿಡುಗಡೆ ಸಮಾರಂಭವು ನವೆಂಬರ್ 28ರಂದು ಶನಿವಾರ ಸಂಜೆ 6 ಗಂಟೆಗೆ ಮೂಡುಬಿದಿರೆಯ ರೋಟರಿ ವಿದ್ಯಾಸಂಸ್ಥೆಯ ಅಮರಾವತಿ ಆಡಿಟೋರಿಯಂನಲ್ಲಿ ನಡೆಯಲಿದೆ.
ಒಟ್ಟು 60 ಕವನಗಳನ್ನು ಒಳಗೊಂಡಿರುವ ಈ ಕವನ ಸಂಕಲನಕ್ಕೆ ಸಾಹಿತಿ ಹಾಗೂ ಶಿಕ್ಷಕ ಅರವಿಂದ ಚೊಕ್ಕಾಡಿ ಅವರು ಮುನ್ನುಡಿ ಬರೆದಿದ್ದಾರೆ. ಸಾಹಿತಿ ಹಾಗೂ ಶಿಕ್ಷಕಿ ಪ್ರೇಮಾ ಆರ್. ಮೂಲ್ಕಿ (ಹನಿಬಿಂದು) ಅವರು ಬೆನ್ನುಡಿ ಬರೆದಿದ್ದು, ಸಾಹಿತಿ ಮತ್ತು ಚಿತ್ರಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ ಅವರು ಆಕರ್ಷಕ ಮುಖಪುಟ ವಿನ್ಯಾಸ ರೂಪಿಸಿದ್ದಾರೆ.
ಕವನಗಳಿಗೆ ಭಾವಗೀತೆಯ ಸ್ಪರ್ಶ
ಈ ಕವನ ಸಂಕಲನದ ‘ಮನವೆಂಬ ಮಂಟಪ’ ಕವನವು ಭಾವಗೀತೆಯಾಗಿ ಮೂಡಿಬಂದಿರುವುದು ವಿಶೇಷ. ಗಜಾನನ ಮರಾಠೆ ಅವರ ರಾಗಸಂಯೋಜನೆಯಲ್ಲಿ ಶ್ವೇತಾ ಹೆಬ್ಬಾರ್ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಾಯಕರಾದ ರಾಘವೇಂದ್ರ ಬೀಜಾಡಿ ಹಾಗೂ ಜೀ ಕನ್ನಡದ ‘ಸರಿಗಮಪ’ ಖ್ಯಾತಿಯ ವಿದ್ವಾನ್ ಯಶವಂತ್ ಎಂ.ಜಿ. ಮೂಡುಬಿದಿರೆ ಅವರು ಸಂಕಲನದ ಎರಡು ಕವನಗಳಿಗೆ ರಾಗಸಂಯೋಜನೆ ಮಾಡಿ ಭಾವಗೀತೆಗಳ ರೂಪದಲ್ಲಿ ಹಾಡಿ ಪ್ರಸ್ತುತಪಡಿಸಲಿದ್ದಾರೆ.
ಕವನಗಳ ಮೂಲಕ ಭಾವನೆ, ಅನುಭವ ಹಾಗೂ ನೆನಪುಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿರುವ ಮೋಹನ್ ಹೊಸ್ಮಾರ್ ಅವರ ಮೊದಲ ಕವನ ಸಂಕಲನ ಸಾಹಿತ್ಯಾಸಕ್ತರ ಗಮನ ಸೆಳೆಯುವ ನಿರೀಕ್ಷೆಯಿದೆ. ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ವಿನಂತಿಸಿದ್ದಾರೆ.

