ಹಾವಂಜೆ: ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಲಗಿರಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಎದುರಿನ ಬಸ್ ತಂಗುದಾಣವು ಶಿಥಿಲಾವಸ್ಥೆಗೆ ತಲುಪಿ ಪ್ರಯಾಣಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ನಾಲ್ಕು ಕಂಬಗಳು ಕುಸಿತದ ಸ್ಥಿತಿಯಲ್ಲಿದ್ದು, ಮೇಲ್ಚಾವಣಿಯೂ ದುರ್ಬಲಗೊಂಡ ಕಾರಣ ಮಳೆ ಹಾಗೂ ಗಾಳಿ ಬೀಸುವ ಸಂದರ್ಭಗಳಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ತಂಗುದಾಣದೊಳಗೆ ನಿಲ್ಲಲು ಸಹ ಭಯಪಡುವಂತಾಗಿತ್ತು.
ಬಸ್ ತಂಗುದಾಣದ ಹಿಂಭಾಗದಲ್ಲೇ ಅಂಗನವಾಡಿ ಕೇಂದ್ರವೂ ಇರುವುದರಿಂದ ಮಕ್ಕಳ ಹಾಗೂ ಪೋಷಕರ ಸುರಕ್ಷತೆ ಕುರಿತ ಆತಂಕವೂ ಹೆಚ್ಚಾಗಿತ್ತು. ಈ ಸಮಸ್ಯೆಯನ್ನು ಹಲವು ಬಾರಿ ಪತ್ರಿಕೆಗಳ ಮೂಲಕ ಬೆಳಕಿಗೆ ತಂದು, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಈ ಹಿಂದೆ ತಂಗುದಾಣ ನಿರ್ಮಿಸಿದ್ದ ವಿಜಯ ಬ್ಯಾಂಕ್ ಆಡಳಿತದ ಗಮನಕ್ಕೂ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ತಂದಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರು.
ಇದೀಗ ಉಡುಪಿ ಜಿಲ್ಲೆಯ ಹೆಸರಾಂತ ಉದ್ಯಮಿ, ಸಮಾಜಸೇವಕ ಹಾಗೂ ದಾನಿ ರಾಯಲ್ ರತ್ನಾಕರ್ ಶೆಟ್ಟಿ ಉಪ್ಪೂರು ಅವರು ದಿವಂಗತ ಡಾ. ಆರೂರು ರಾಘವೇಂದ್ರ ರಾವ್ ದಂಪತಿಯವರ ಸವಿನೆನಪಿನಲ್ಲಿ ಬಸ್ ತಂಗುದಾಣವನ್ನು ಸಂಪೂರ್ಣ ನವೀಕರಿಸಿ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. ನೂತನವಾಗಿ ನಾಲ್ಕು ಕಬ್ಬಿಣದ ಕಂಬಗಳು ಹಾಗೂ ಮೇಲ್ಚಾವಣಿಗೆ ರೂಫಿಂಗ್ ಶೀಟ್ ಅಳವಡಿಸಲಾಗಿದ್ದು, ತಂಗುದಾಣದ ಮೇಲ್ಭಾಗದಲ್ಲಿದ್ದ ಅಪಾಯಕಾರಿ ಮರದ ಕೊಂಬೆಗಳನ್ನೂ ತೆರವುಗೊಳಿಸಲಾಗಿದೆ.
ನವೀಕೃತ ಬಸ್ ತಂಗುದಾಣದ ಉದ್ಘಾಟನಾ ಸಮಾರಂಭವು ಜುಲೈ 22ರಂದು ನಡೆಯಲಿದ್ದು, ಶ್ರೀ ಶ್ರೀ ರಮಾನಂದ ಗುರುಜಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಸುರಕ್ಷಿತ ಬಸ್ ತಂಗುದಾಣ ನಿರ್ಮಿಸಿಕೊಟ್ಟ ರಾಯಲ್ ರತ್ನಾಕರ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯವನ್ನು ಹಾವಂಜೆ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರು ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಸೇವೆಗಳು ಮತ್ತಷ್ಟು ನಡೆಯಲಿ ಎಂದು ಆಶಿಸಿದ್ದಾರೆ.

