ಹೆಜಮಾಡಿ ನಾರಾಯಣ ಎಸ್ ಪೂಜಾರಿ ನಿಧನ

0
2

ಹೆಜಮಾಡಿಯ ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ತಾಲೂಕು ಪಂಚಾಯತ್ ಸದಸ್ಯರು ಹಾಗೂ ಸತ್ಯನಾರಾಯಣ ಮಂದಿರದ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಶ್ರೀ ನಾರಾಯಣ ಪೂಜಾರಿ (78) ಅವರು ಇಂದು ಮುಂಜಾನೆ ದೈವಾಧೀನರಾದ ಸುದ್ದಿ ತೀವ್ರ ದುಃಖವನ್ನುಂಟುಮಾಡಿದೆ.

ಮೃತರು ಪತ್ನಿ, ಭಾರತ್ ಕೋ-ಆಪ್ ಬ್ಯಾಂಕ್ ಸುರತ್ಕಲ್ ಶಾಖೆಯ ಮ್ಯಾನೇಜರ್ ಅಜಿತ್ ಕುಮಾರ್ ಸೇರಿದಂತೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

1975 ರಲ್ಲಿ ಉಡುಪಿ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಕಾಪು ಕ್ಷೇತ್ರದ ಚಾಲಗೇಣಿ ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಧೀಮಂತ ನಾಯಕರು. 1970 ರ ದಶಕದಲ್ಲಿ ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಅಪಾರ ಶ್ರಮ ವಹಿಸಿದ್ದರು.

ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಜನಾರ್ಧನ ಪೂಜಾರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನಿಕಟವರ್ತಿಯಾಗಿದ್ದ ಅವರು, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಸಾರ್ವಜನಿಕ ಜೀವನದಲ್ಲಿ ತಮ್ಮ ಸೇವೆ, ಹೋರಾಟ ಹಾಗೂ ಪಕ್ಷ ಸಂಘಟನೆಯ ಮೂಲಕ ಗುರುತಿಸಿಕೊಂಡಿದ್ದ ಅವರ ನಿಧನದಿಂದ ಹೆಜಮಾಡಿ ಭಾಗವು ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.

ಮೃತರ ನಿಧನಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಎ. ಗಫೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೋಳಿಕೆಬೈಲು, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷ ವೈ. ಸುಕುಮಾರ್, ಕೆಪಿಸಿಸಿ ಸಂಯೋಜಕ ಅಬ್ದುಲ್ ಅಜೀಜ್ ಹೆಜಮಾಡಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ ರವರು ಸಂತಾಪ ವ್ಯಕ್ತಪಡಿಸಿದ್ದಾರೆ