ಉಡುಪಿ : ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಆಗುವ ಅಪಮಾನವನ್ನು ತಡೆಗಟ್ಟುವ ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜ ಸೇರಿದಂತೆ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಡುಪಿಯ ವಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಗ್ಗೆ ಪ್ರವಚನವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಕುಮಾರಿ ಪ್ರಜ್ಞಾ ಅವರು ಪ್ರವಚನ ನೀಡಿದರು. ಶ್ರೀನಿವಾಸ ಗಾವನ್ಸ್ಕಾರ ಮತ್ತು ಸೌ. ಮಲ್ಲಿಕಾ ಭಂಡಾರಿ ಅವರು ಸಹಯೋಗ ನೀಡಿದರು. ಶಾಲೆಯ ಅಧ್ಯಾಪಕ ವೃಂದದವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕಾರ್ಯಕ್ರಮದ ಮೂಲಕ ಶಾಲೆಯ ಒಟ್ಟು 146 ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಗೌರವ, ರಾಷ್ಟ್ರೀಯ ಚಿಹ್ನೆಗಳ ಮಹತ್ವ ಹಾಗೂ ಅವುಗಳನ್ನು ಗೌರವಿಸುವ ಕರ್ತವ್ಯದ ಕುರಿತು ಮಾಹಿತಿ ಪಡೆದುಕೊಂಡರು.

