ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

0
6

ಉಡುಪಿ : ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್ ಇಲಾಖೆಯಂತೆಯೇ ಗೃಹರಕ್ಷಕರು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿ ಜಿಲ್ಲೆಯಲ್ಲಿ 30 ಜನ ಗೃಹರಕ್ಷಕರನ್ನು ಪೊಲೀಸ್ ಇಲಾಖೆಗೆ ನಿಯೋಜಿಸುವುದಕ್ಕೆ ಅಗತ್ಯ ಪ್ರಕ್ರಿಯೆ ನಡೆಸಲು ಯೋಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.

ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಉಡುಪಿ ಪೊಲೀಸ್ ಇಲಾಖೆಯಲ್ಲಿ 30 ಹುದ್ದೆಗಳು ತೆರವಾಗಲಿವೆ. ಈ ಹಿನ್ನೆಲೆಯಲ್ಲಿ ಇನ್ನೂ 30 ಜನ ಗೃಹ ರಕ್ಷಕರನ್ನು ಇಲಾಖೆಗೆ ನಿಯೋಜಿಸುವುದಕ್ಕೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಅವರ ನಿಯೋಜನೆಗೆ ಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ಕ ಪಡೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನರಿಂದ ಮೆಚ್ಚುಗೆ ಪಡೆದಿದೆ ಎಂದ ಅವರು ಗೃಹರಕಕ್ಷಕರು ತಮ್ಮ ಮಾನಸಿಕ ಆರೋಗ್ಯ ಹಾಗೂ ದಇಹಿಕ ಸಾಮರ್ಥ್ಯವನ್ನು ವೃದ್ದಿಸಿಕೊಳ್ಳಲು ಕ್ರೀಡೆ ಸಹಾಯ ಮಾಡುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸಿದ ಅವರು ಮುಂದಿನ ದಿನಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಲು ಕರೆ ನೀಡಿದರು.

ಗೃಹರಕ್ಷಕದಳದ ಸಮಾದೇಷ್ಟ ಡಾ. ರೋಶನ್ ಕುಮಾರ್ ಶೆಟ್ಟಿ ಮಾತನಾಡಿ ಕ್ರೀಡಾ ಕೂಟದಿಂದ ಸ್ನೇಹ ಬಾಂಧವ್ಯ ಹೊಂದಲು ಸಾಧ್ಯ. ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಗೃಹ ರಕ್ಷಕರು ಚೇತೋ ಹಾರಿಯಾಗಿ ಕಾರ್ಯನಿರ್ವಹಿಸಲು ಕ್ರೀಡಾಕೂಟ ಸಹಕಾರಿ ಎಂದರು.

ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಉದ್ಯಮಿಗಳಾದ ಸಂಪತ್ ಶೆಟ್ಟಿ, ಅಜಯ್ ಪಿ. ಶೆಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕ ದಳದ ಸಮಾದೇಷ್ಟೆ ನಸೀಮ್ ತಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಸ್ವಾಗತಿಸಿದರು. ಬ್ರಹ್ಮಾವರ ಪಿಎಲ್ ಸಿ ಘಟಕ್ ಸ್ಟೀವನ್ ಪ್ರಕಾಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.