ಮಾಣಿ ಫ್ಲೈಓವರ್ ರಸ್ತೆಯಲ್ಲಿ ಭೀಕರ ಅಪಘಾತ : ಮಹಿಳೆ ಮೃತ್ಯು

0
28

ಮಾಣಿ : ಫ್ಲೈಓವರ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 55 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಮಡಿಕೇರಿ ನಿವಾಸಿ ನಫೀಸಾ (55) ಮೃತಪಟ್ಟವರು ಎಂದು ತಿಳಿದುಬಂದಿದೆ. ಅಪಘಾತದ ವೇಳೆ ಆಲ್ಟೊ ಕಾರಿನಲ್ಲಿ ಚಾಲಕ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ನಾಲ್ವರು ಮಹಿಳೆಯರು ಹಾಗೂ ಚಾಲಕ ಉಮ್ರಾ ತರಗತಿ ಮುಗಿಸಿಕೊಂಡು ಮನೆಗೆ ವಾಪಸ್ ತೆರಳುತ್ತಿದ್ದ ಕುಟುಂಬದವರು ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಸರ್ವಿಸ್ ರಸ್ತೆ ವಿನ್ಯಾಸದ ಬಗ್ಗೆ ಸ್ಥಳೀಯರ ಅಸಮಾಧಾನ

ಮಾಣಿ ಬಳಿ ಪುತ್ತೂರು–ಮಡಿಕೇರಿ–ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಯ ವಿನ್ಯಾಸ ಹಾಗೂ ಪ್ರವೇಶ ಮಾರ್ಗದ ಕುರಿತು ಸ್ಥಳೀಯರು ಈ ಹಿಂದೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೊರಗಿನಿಂದ ಬರುವ ವಾಹನ ಸವಾರರಿಗೆ ಸರ್ವಿಸ್ ರಸ್ತೆ ಸ್ಪಷ್ಟವಾಗಿ ಗೋಚರಿಸದೆ ಗೊಂದಲ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಿರಿದಾದ ಪ್ರವೇಶ ಮಾರ್ಗ, ಸಮರ್ಪಕ ಸೂಚನಾ ಫಲಕಗಳ ಕೊರತೆ ಹಾಗೂ ರಸ್ತೆ ವಿನ್ಯಾಸದಲ್ಲಿರುವ ಗೊಂದಲ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸರ್ವಿಸ್ ರಸ್ತೆಯ ಪ್ರವೇಶ ಮಾರ್ಗವನ್ನು ಸುಧಾರಿಸುವುದು, ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವುದು ಹಾಗೂ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಗೋಚರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಹಾಗೂ ಅಪಘಾತದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.