ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ

0
6

ಬಂಟ್ವಾಳ : ಪರಿಸರವು ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿದ್ದು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜೀವಿಗಳಿಗೆ ಹಾನಿಕಾರಕವಾದ ಅತಿನೇರಳೆ ಕಿರಣಗಳಿಂದ ಓಝೋನ್ ಪದರವು ರಕ್ಷಣೆ ನೀಡುತ್ತಿದ್ದು, ಅದಕ್ಕೆ ಧಕ್ಕೆ ಉಂಟಾಗದಂತೆ ನಾವೆಲ್ಲರೂ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಮೂಲಕ ಓಝೋನ್ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಬಂಟ್ವಾಳ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ನಾಯಕ್ ಹೇಳಿದರು.

ಶ್ರೀ ವೆಂಕಟರಮಣಸ್ವಾಮಿ ಕಾಲೇಜು, ಬಂಟ್ವಾಳದ ವಿಜ್ಞಾನ ಸಂಘ, ಐ.ಐ.ಸಿ. ಹಾಗೂ ಐ.ಕ್ಯೂ.ಎ.ಸಿ.ಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಓಝೋನ್ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಓಝೋನ್ ಪದರವು ಭೂಮಿಯ ಜೀವಜಾಲವನ್ನು ಸೂರ್ಯನಿಂದ ಹೊರಸೂಸುವ ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ಪರಿಸರ ಸಮಸ್ಯೆಗಳ ಹಿನ್ನೆಲೆಯಲ್ಲಿ ಓಝೋನ್ ಪದರದ ಸಂರಕ್ಷಣೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಡಿ. ಮಂಚಿ ಮಾತನಾಡಿ, ಪ್ರಕೃತಿಯಲ್ಲಿನ ಸಮತೋಲನವನ್ನು ಕಾಪಾಡುವಲ್ಲಿ ಓಝೋನ್ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಓಝೋನ್ ಪದರದ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ವಿಜ್ಞಾನ ಸಂಘದ ಸಂಯೋಜಕ ಡಾ. ವಿನಾಯಕ ಕೆ.ಎಸ್. ಸ್ವಾಗತಿಸಿದರು. ಸುಪ್ರೀತ್ ಕಡಕೋಳ್ ವಂದಿಸಿದರು. ಕು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.

ವಿಶ್ವ ಓಝೋನ್ ದಿನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.