ಮಾದಕ ವ್ಯಸನದ ವಿರುದ್ಧ ಯುವಶಕ್ತಿಯ ಜಾಗೃತಿ ಅಭಿಯಾನ

0
11

ಸಾಣೂರು: ಯುವಜನತೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ನಾಯಕತ್ವ ಗುಣ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸಾಣೂರಿನಲ್ಲಿ ನೆರೆಹೊರೆ ಯುವ ಸಂಸತ್ತು ಹಾಗೂ ನಶಾ ಮುಕ್ತ ಯುವ ಸಂವಾದ ಕಾರ್ಯಕ್ರಮ ನಡೆಯಿತು.

ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್ (ಮೈ ಭಾರತ್) ಉಡುಪಿ, ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಉದ್ಘಾಟಿಸಿದರು.

ನಶೆಯ ದಾಸರಾಗುತ್ತಿರುವ ಯುವಶಕ್ತಿ ಕಳವಳಕಾರಿ: ಸಂತೋಷ್ ಕಾರ್ಕಳ

ನಶಾ ಮುಕ್ತ ಯುವಜನತೆ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಎಸ್.ಪಿ. ಕಚೇರಿಯ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಕಾರ್ಕಳ ಮಾತನಾಡಿ, ಯುವಕರು ದೇಶದ ಶಕ್ತಿ ಹಾಗೂ ಭವಿಷ್ಯವಾಗಿದ್ದು, ಅದೇ ಯುವಶಕ್ತಿ ಇಂದು ಮಾದಕ ವ್ಯಸನಗಳ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಸಿಗರೇಟ್, ಗುಟ್ಕಾ, ಮದ್ಯ ಹಾಗೂ ಡ್ರಗ್ಸ್‌ಗಳ ಸೇವನೆ ಆರಂಭದಲ್ಲಿ ಸ್ನೇಹಿತರ ಒತ್ತಡ ಅಥವಾ ಫ್ಯಾಷನ್‌ಗಾಗಿ ಶುರುವಾಗಬಹುದು. ಆದರೆ ಕ್ರಮೇಣ ಅದೇ ವ್ಯಸನ ವ್ಯಕ್ತಿಯ ಜೀವನವನ್ನೇ ನಾಶಪಡಿಸುತ್ತದೆ. ಒಬ್ಬ ಯುವಕ ವ್ಯಸನಕ್ಕೆ ಬಲಿಯಾದರೆ ಆತನೊಬ್ಬನೇ ಅಲ್ಲ, ಆತನ ಕುಟುಂಬ ಹಾಗೂ ಸಮಾಜವೂ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಯುವಜನತೆ ನಶೆಯಿಂದ ದೂರವಿರುವುದರ ಜೊತೆಗೆ ತಮ್ಮ ಸ್ನೇಹಿತರನ್ನೂ ವ್ಯಸನದಿಂದ ದೂರವಿಡುವ ಸಂಕಲ್ಪ ಮಾಡಬೇಕು. ನಮ್ಮ ನೆರೆಹೊರೆಯನ್ನು ನಶಾಮುಕ್ತವಾಗಿಸುವ ಜವಾಬ್ದಾರಿಯನ್ನೂ ಯುವಕರು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಒಂದು ರಾಷ್ಟ್ರ ಒಂದು ಚುನಾವಣೆ: ಸಾಧಕ-ಬಾಧಕಗಳ ಚರ್ಚೆ

ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಕುರಿತು ಸಂವಾದ ನಡೆಸಿದ ಸಹಕಾರ ಭಾರತಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸಾಣೂರಿನ ನರಸಿಂಹ ಕಾಮತ್ ಅವರು ಯೋಜನೆಯ ಸಾಧಕ-ಬಾಧಕಗಳ ಕುರಿತು ವಿವರಿಸಿದರು.

ಪದೇಪದೇ ಚುನಾವಣೆಗಳು ನಡೆಯುವುದರಿಂದ ಸರಕಾರದ ಆಡಳಿತಾತ್ಮಕ ಕಾರ್ಯಗಳಿಗೆ ಅಡಚಣೆಯಾಗುವುದರ ಜೊತೆಗೆ ಚುನಾವಣಾ ವೆಚ್ಚವೂ ಹೆಚ್ಚಾಗುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಸರಕಾರದ ಕೋಟ್ಯಂತರ ರೂಪಾಯಿ ಹಣ ಉಳಿತಾಯವಾಗಬಹುದು. ಆ ಹಣವನ್ನು ಶಿಕ್ಷಣ, ಆರೋಗ್ಯ ಹಾಗೂ ರಸ್ತೆ ಅಭಿವೃದ್ಧಿಗೆ ಬಳಸಬಹುದು. ಅಲ್ಲದೆ ಶಿಕ್ಷಕರು, ಪೊಲೀಸರು ಮತ್ತು ಸರ್ಕಾರಿ ನೌಕರರು ಪದೇಪದೇ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಅಗತ್ಯ ಕಡಿಮೆಯಾಗಬಹುದು ಎಂದು ತಿಳಿಸಿದರು.

ಇದೇ ವೇಳೆ, ಏಕಕಾಲದ ಚುನಾವಣೆಗಳಿಂದ ಸ್ಥಳೀಯ ಸಮಸ್ಯೆಗಳಿಗೆ ಸೂಕ್ತ ಆದ್ಯತೆ ದೊರೆಯದಿರುವ ಸಾಧ್ಯತೆ, ಪ್ರಾದೇಶಿಕ ಪಕ್ಷಗಳ ಪ್ರಭಾವ ಕುಗ್ಗುವ ಆತಂಕ ಹಾಗೂ ಮಧ್ಯಂತರದಲ್ಲಿ ಸರಕಾರ ಪತನಗೊಂಡರೆ ಎದುರಾಗುವ ಸಾಂವಿಧಾನಿಕ ಸವಾಲುಗಳ ಬಗ್ಗೆಯೂ ಅವರು ವಿವರಿಸಿದರು. ಈ ಕುರಿತು ವಿದ್ಯಾರ್ಥಿಗಳು ವಿಷಯದ ವಿವಿಧ ಆಯಾಮಗಳನ್ನು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವಕ ಮಂಡಲದ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಸುಚೇತಾ ಕಾಮತ್, ಮಂಡಲದ ಕಾರ್ಯದರ್ಶಿ ರಾಜೇಶ್, ಪದಾಧಿಕಾರಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ನಶಾ ಮುಕ್ತ ಭಾರತ’ ವಿಷಯದ ಕುರಿತು ಘೋಷವಾಕ್ಯ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಧನುಷ್ ಪ್ರಥಮ, ರಕ್ಷಿತ್ ಎಸ್. ಆಚಾರ್ಯ ದ್ವಿತೀಯ ಹಾಗೂ ದೀಕ್ಷಿತ್ ತೃತೀಯ ಸ್ಥಾನ ಗಳಿಸಿದರು.

200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಡಲದ ಜೊತೆ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಸುಮತಿ ಪ್ರಭು ವಂದಿಸಿದರು.