ಹುಳಿಯಾರು : ಸೇತುವೆ ಬಳಿ ಭೀಕರ ಅಪಘಾತ – ಕಾರು ಢಿಕ್ಕಿ, ಒಬ್ಬ ಸಜೀವ ದಹನ

0
107

ಕಾರೊಂದು ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಳಿಯಾರು ಹೋಬಳಿಯ ಕೋರಗೆರೆ ಬಳಿ ನಡೆದಿದೆ.

ಮೃತರನ್ನು ತಿಮ್ಮನಹಳ್ಳಿ ಗ್ರಾಮದ ರಾಮಯ್ಯ (55) ಎಂದು ಗುರುತಿಸಲಾಗಿದೆ. ರಾಮಯ್ಯ ಬೆಳವಾಡಿ, ಹಾಗಲವಾಡಿ, ಬಿಳೆಕಲ್ಲು ಹಟ್ಟಿ ಗ್ರಾಮದ ಇತರ ನಾಲ್ವರೊಂದಿಗೆ ಅರಸೀಕೆರೆ ತಾಲ್ಲೂಕಿನ ಅಮ್ಮನಹಟ್ಟಿ ಮಾಳಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಮುಗಿಸಿ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೋರಗೆರೆ ಸಮೀಪದ ಸೇತುವೆಗೆ ಕಾರು ವೇಗವಾಗಿ ಢಿಕ್ಕಿ ಹೊಡೆದ ರಭಸಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಕಾರಿನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ಐವರೂ ಒಳಗಡೆ ಸಿಲುಕಿ ಕಿರುಚಾಡುತ್ತಿದ್ದರು. ಇದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕಾರಿನ ಬಾಗಿಲುಗಳನ್ನು ಮುರಿದು ನಾಲ್ವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ರಾಮಯ್ಯ ಅವರು ಕಾರಿನೊಳಗೆ ಸಾವನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ತಕ್ಷಣವೇ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ನೀರಿನ ಟ್ಯಾಂಕರ್ ತರಿಸಿ ಕಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯ ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here