ಸುಲ್ಕೇರಿ ಮೊಗ್ರು : ಸೇವೆಯೇ ನಮ್ಮ ಧ್ಯೇಯ, ಮಾನವೀಯತೆಯೇ ನಮ್ಮ ಶಕ್ತಿ ಎಂಬ ಆಶಯದೊಂದಿಗೆ ಹಿಂದೂ ಯುವಸೇನೆ ಸೇವಾ ಸಂಘ ಸುಲ್ಕೇರಿ ಮೊಗ್ರು ವತಿಯಿಂದ ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಿಸುವ ಮೂಲಕ ಮಾನವೀಯ ಸೇವಾ ಕಾರ್ಯ ನಡೆಸಲಾಯಿತು.
ಸಂಘದ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸೇವಾ ಯೋಜನೆಯ ಭಾಗವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಹಾಯಧನ ವಿತರಿಸಲಾಯಿತು.
ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಸಣ್ಣ ಪ್ರಯತ್ನವೂ ಅವರ ಬದುಕಿನಲ್ಲಿ ಭರವಸೆಯ ಬೆಳಕಾಗಬಹುದು ಎಂಬ ಸದುದ್ದೇಶದಿಂದ ಈ ಸೇವಾ ಕಾರ್ಯವನ್ನು ಆಯೋಜಿಸಲಾಯಿತು. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವುದು ಮತ್ತು ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚುವುದು ಸಂಘದ ಸೇವಾ ಮನೋಭಾವದ ಪ್ರಮುಖ ಉದ್ದೇಶವಾಗಿದೆ.
ದಶಕದ ಸೇವಾ ಪಯಣವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಗೆ ಆದ್ಯತೆ ನೀಡಿದ ಸಂಘದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

