
ಮಕ್ಕಳಾಗಿಲ್ಲ ಎಂಬ ವಿಚಾರವಾಗಿ ಪದೇಪದೇ ಹೀಯಾಳಿಸಿ ಜಗಳವಾಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೆಂಪೇಗೌಡ ನಗರದ ಲಕ್ಷ್ಮೀಪುರದಲ್ಲಿ ನಡೆದಿದೆ. ರಾಜಶೇಖರ್ (44) ಕೊಲೆಯಾದ ವ್ಯಕ್ತಿಯಾಗಿದ್ದು, ಅವರ ಪತ್ನಿ ಮಾಲಾಶ್ರೀ ಆರೋಪಿಯಾಗಿದ್ದಾರೆ.
ಬ್ಯಾಂಕ್ನಲ್ಲಿ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜಶೇಖರ್ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಹಗಲಿನಲ್ಲಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಅವರು, ರಾತ್ರಿ ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಕ್ಕಳಾಗಿಲ್ಲ ಎಂಬ ವಿಚಾರವಾಗಿ ದಂಪತಿ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು.
ನವೆಂಬರ್ 11ರ ರಾತ್ರಿ ಕೂಡ ರಾಜಶೇಖರ್ ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ದಂಪತಿ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಮಾಲಾಶ್ರೀ ಚಾಕುವಿನಿಂದ ಪತಿಗೆ ಇರಿದಿದ್ದಾರೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ರಾಜಶೇಖರ್ ಮೃತಪಟ್ಟಿದ್ದಾರೆ.
ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆದಿದ್ದ ಪತ್ನಿ
ಮಾಹಿತಿಯ ಪ್ರಕಾರ, ಮಾಲಾಶ್ರೀ ಈ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸುಮಾರು ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಮಕ್ಕಳಾಗಿಲ್ಲ ಎಂಬ ವಿಚಾರವಾಗಿ ಪತಿ ಪದೇಪದೇ ಜಗಳವಾಡುತ್ತಿದ್ದುದರಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಐದು ವರ್ಷಗಳ ಹಿಂದೆ ರಾಜಶೇಖರ್ ಮತ್ತು ಮಾಲಾಶ್ರೀ ವಿವಾಹವಾಗಿದ್ದರು. ಸದ್ಯ ಮಾಲಾಶ್ರೀ ಎರಡು ತಿಂಗಳ ಗರ್ಭಿಣಿ ಎಂಬ ಮಾಹಿತಿಯೂ ವರದಿಯಾಗಿದೆ.
ಘಟನೆಯ ಬಳಿಕ ಮಾಲಾಶ್ರೀ ಮನೆಯವರಿಗೆ ಕರೆ ಮಾಡಿ ಅಳುತ್ತಾ ವಿಷಯ ತಿಳಿಸಿದ್ದರು ಎನ್ನಲಾಗಿದೆ. ಮನೆಯ ಮೊದಲ ಮಹಡಿಯಲ್ಲಿ ರಾಜಶೇಖರ್ ಅವರ ತಾಯಿ ವಾಸವಾಗಿದ್ದು, ಘಟನೆ ಬಳಿಕ ಬಾಗಿಲು ಬಡಿದರೂ ಅವರು ಬಾಗಿಲು ತೆರೆದಿರಲಿಲ್ಲ. ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವದಿಂದ ರಾಜಶೇಖರ್ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಮಾವನ ಹೇಳಿಕೆ
ಮೃತ ರಾಜಶೇಖರ್ ಅವರ ಮಾವ ರಾಜಣ್ಣ ಪ್ರತಿಕ್ರಿಯಿಸಿ, ರಾತ್ರಿ 11.30ರಿಂದ 12 ಗಂಟೆಯ ಸುಮಾರಿಗೆ ಸ್ನೇಹಿತರು ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ತಡರಾತ್ರಿಯಾಗಿದ್ದರಿಂದ ಬೆಳಗ್ಗೆ ಬರುವುದಾಗಿ ತಿಳಿಸಿ, ರಾಜಶೇಖರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಹೇಳಿದ್ದಾರೆ.
ರಾಜಶೇಖರ್ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಿದ್ದರು. ಆಕೆಗೆ ಯಾವುದೇ ಕೆಲಸ ಮಾಡಿಸದೆ ಆರಾಮವಾಗಿ ನೋಡಿಕೊಂಡಿದ್ದರು. ಆದರೂ ಇಂತಹ ಘಟನೆ ನಡೆದಿದೆ ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆಗೆ ಕಾರಣವಾದ ನಿಖರ ಸಂಗತಿಗಳು ತನಿಖೆಯಿಂದ ತಿಳಿದುಬರಬೇಕಿದೆ.
