ಮೂಡುಬಿದಿರೆ : ಹರಿಹರ ಪುತ್ರ ಅಯ್ಯಪ್ಪನಿಗೆ ದೇಶಾದ್ಯಂತ ಲಕ್ಷಾಂತರ ಭಕ್ತರಿದ್ದು,ಅವರುಗಳ ಕಠಿಣ ಉಪವಾಸ ವ್ರತ ನಿಯಮ ಪಾಲನೆಯಿಂದ ಊರೂರಲ್ಲಿ ಧರ್ಮ ಜಾಗೃತಿಯ ಕಾರ್ಯ ನಿರಂತರವಾಗಿ ಆಗುತ್ತಿದೆ.ಧರ್ಮ,ಸಂಸ್ಕೃತಿ ಉಳಿದರೆ ಮಾತ್ರ ಈ ದೇಶ ಉಳಿದೀತು.ನಾವೂ ಉಳಿದೇವು ಈ ನಿಟ್ಟಿನಲ್ಲಿ ಬೆಳುವಾಯಿ ಕುಕ್ಕುಡೇಲುವಿನ ಈ ಪುಟ್ಟ ಗ್ರಾಮದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ಭವ್ಯವಾದ ಶ್ರೀ ಅಯ್ಯಪ್ಪನ ಸಾನ್ನಿಧ್ಯ ಜೀರ್ಣೋದ್ಧಾರಗೊಂಡು ಧರ್ಮಜಾಗೃತಿ, ಸಂಸ್ಕೃತಿಯ ಸಾನ್ನಿಧ್ಯವಾಗುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮಿಗಳು ಜೀರ್ಣೋದ್ಧಾರಗೊಂಡ ನೂತನ ಶ್ರೀ ಹರಿಹರ ಪುತ್ರ ಮಂದಿರವನ್ನು ಲೋಕಾರ್ಪಣೆ ಗೊಳಿಸಿ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಸಮಾರಂಭದಲ್ಲಿ ಮಾತನಾಡಿದ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕದ ಅಧ್ಯಕ್ಷರೂ ಜಿಲ್ಲಾ ಹಿರಿಯ ಸಹಕಾರೀ ಧುರೀಣರೂ ಆದ ಎಂ ದಯಾನಂದ ಪೈಯವರು ಮಾತನಾಡಿ 40 ವರ್ಷಗಳ ಹಿಂದೆ ದಿವಂಗತ ಗೋಪಾಲ ಪೈಯವರು ತಮ್ಮ ಸ್ವಂತ ಪರಿಶ್ರಮ ಮತ್ತು ತ್ಯಾಗ ತಪಸ್ಸಿನ ಫಲದಿಂದ ಈ ಅಯ್ಯಪ್ಪ ಮಂದಿರವನ್ನು ಸ್ಥಾಪಿಸಿದ್ದು ,ನಂತರ ಅವರ ಪುತ್ರ ಸುರೇಶ್ ಪೈಯವರ ನಿರಂತರ ಸೇವೆ,ಸಹಕಾರ,ಪ್ರೋತ್ಸಾಹ ಹಾಗೂ ಭಕ್ತರ ಒಗ್ಗೂಡುವಿಕೆಯಿಂದ ಅಯ್ಯಪ್ಪ ಮಂದಿರದ ಜೀರ್ಣೋದ್ಧಾರವಾಗಿ ಇದೀಗ ಊರ ಪರವೂರ ಭಕ್ತರ ಶ್ರದ್ಧಾ ಕೇಂದ್ರವಾಗಿ ಕಂಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬೆಳುವಾಯಿ ಸೋಮನಾಥ ಕೋಟ್ಯಾನ್ ರವರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಮಿತಿಯ ಗೌರವಾಧ್ಯಕ್ಷರಾದ ಸುರೇಶ್ ಪೈ,ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಪ್ರಖಂಡದ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಮರಾಠಿ ಸಮಾಜ ಸೇವಾ ಸಂಘ (ರಿ) ಕುಕ್ಕುಡೇಲು ಸಂಚಾಲಕರಾದ ಬಿ ಕೃಷ್ಣ ನಾಯ್ಕ, ಗಣೇಶ ಗುರುಸ್ವಾಮಿ, ಅಣ್ಣಿ ಬಿ ಪೂಜಾರಿಯವರು ಭಾಗವಹಿಸಿ ಶುಭಾಂಶನೆಗೈದರು.
ಅತೀ ಸುಂದರವಾಗಿ ಮಂದಿರ ನಿರ್ಮಾಣ ಮಾಡಿದ ಸುರಕ್ಷಾ ಕನ್ಸ್ಟ್ರಕ್ಷನ್ ನ ಸುರೇಶ್ ಕುಮಾರ್ ರವರನ್ನು ಸಮಿತಿಯ ವತಿಯಿಂದ ಫಲ ಪುಷ್ಪ ,ಹಾರ ಹಾಕಿ ಗೌರವಿಸಿ ಸನ್ಮಾನಿಸಲಾಯಿತು.ಸೋಮನಾಥ ಕೋಟ್ಯಾನ್ ಪ್ರಸ್ಥಾಪನೆ ಸಹಿತ ಸ್ವಾಗತಿಸಿದರು.ಬೆಳುವಾಯಿ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನಂತರ ಪಂಚ ಭಜನಾ ತಂಡಗಳಿಂದ ಪಂಚ ಭಜನಾ ಮಂಡಳಿ ಮಂಗಲೋತ್ಸವ ಜರುಗಿತು.ಈ ಸಂದರ್ಭದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು .

