ಅಕ್ರಮ ಸಂಬಂಧದ ಗಲಾಟೆ : ಪತ್ನಿಯನ್ನು ತುಳಿದು ಕೊಂದ ಪತಿ

0
56

ಬೆಂಗಳೂರು ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. ಸದಾ ಹಣ ಮತ್ತು ಆಸ್ತಿ ವಿಚಾರಕ್ಕೆ ಜಗಳವಾಡುತ್ತಿದ್ದ ದಂಪತಿಗಳ ನಡುವಿನ ಕಲಹ ವಿಕೋಪಕ್ಕೆ ತೆರಳಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಸಂಭವಿಸಿದೆ.

ಮೃತ ಮಹಿಳೆಯನ್ನು 34 ವರ್ಷದ ಕಾವ್ಯಾ ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆರೋಪಿ ದರಿಯಪ್ಪ ಬೆಂಗಳೂರಿನಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದು, ಕಳೆದ ಒಂದು ವಾರದಿಂದ ಮನೆಯಲ್ಲಿ ಹಣಕಾಸಿನ ವಿಚಾರಕ್ಕೆ ದಂಪತಿಗಳ ನಡುವೆ ತೀವ್ರ ಗಲಾಟೆ ನಡೆಯುತ್ತಿತ್ತು.

ದರಿಯಪ್ಪ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಹಣ ತಂದಿಟ್ಟಿದ್ದನು. ಈ ಹಣವನ್ನು ತನ್ನ ಅಣ್ಣನಿಗೆ ಕೊಡಬೇಕು ಎಂದು ಪತ್ನಿ ಕಾವ್ಯಾ ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ದಂಪತಿಗಳ ನಡುವೆ ಜಗಳ ವಿಕೋಪಕ್ಕೆ ಹೋಗಿದ್ದು, ಸಿಟ್ಟಿಗೆದ್ದ ದರಿಯಪ್ಪ ಪತ್ನಿಯ ಕುತ್ತಿಗೆಯ ಮೇಲೆ ಕಾಲಿಟ್ಟು ತುಳಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾನೆ.

ಈ ಕೊಲೆ ಪ್ರಕರಣದ ಬೆನ್ನಲ್ಲೇ ದರಿಯಪ್ಪನ ಸ್ನೇಹಿತ ವೆಂಕಟಾಚಲಯ್ಯ ದರಿಯಪ್ಪನ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ದರಿಯಪ್ಪನಿಗೆ ಪರಸ್ತ್ರೀಯರ ವ್ಯಾಮೋಹ ವಿಪರೀತವಾಗಿತ್ತು. ಆತ ಬೇರೆ ಹೆಣ್ಣುಮಕ್ಕಳ ಜೊತೆಗಿರುವ ಫೋಟೋಗಳನ್ನು ತನ್ನ ಪತ್ನಿಗೇ ತೋರಿಸಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಈ ವಿಚಾರದಿಂದ ಕಾವ್ಯಾ ಮಾನಸಿಕವಾಗಿ ಸಾಕಷ್ಟು ನೊಂದಿದ್ದರು. ಈ ಹಿಂದೆ ಹಲವು ಬಾರಿ ವೆಂಕಟಾಚಲಯ್ಯ ಅವರು ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿಸಿದ್ದರು. ಆದರೆ ಇತ್ತೀಚೆಗೆ ದರಿಯಪ್ಪ ಯಾರಿಗೂ ತಿಳಿಸದಂತೆ ಮನೆ ಖಾಲಿ ಮಾಡಿಕೊಂಡು ನಾಗಸಂದ್ರಕ್ಕೆ ಬಂದು ನೆಲೆಸಿದ್ದ..

ಘಟನಾ ಸ್ಥಳಕ್ಕೆ ಪೀಣ್ಯಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಕಾವ್ಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಣದ ಜಗಳವೋ ಅಥವಾ ಪತಿಯ ಅಕ್ರಮ ಸಂಬಂಧದ ವಿಚಾರವೇ ಈ ಕೊಲೆಗೆ ಪ್ರಮುಖ ಕಾರಣವೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇತ್ತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here