‘ಹೋಟೆಲ್ ಹೆಡ್ ಕುಕ್’ ಭೀಕರ ಕೊಲೆ : ಶವ ಸಾಗಣೆಯಲ್ಲಿ ಸಿಕ್ಕಿಬಿದ್ದ ಮಾಲೀಕ..!

0
134

ಶಿವಮೊಗ್ಗ : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕನೊಬ್ಬ ತನ್ನದೇ ಸಂಸ್ಥೆಯ ಹೆಡ್ ಕುಕ್ ಅನ್ನು ಸ್ನೂಕರ್ ಸ್ಟಿಕ್‌ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸಂಭವಿಸಿದೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸುವಾಗ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸಾಗರ ನಗರದ ಶಿವಮೊಗ್ಗ ರಸ್ತೆಯಲ್ಲಿರುವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ‘ರೂಫ್ ಟಾಪ್ ಕೆಫೆ & ಗೇಮ್ ಜೋನ್’ನಲ್ಲಿ ಈ ರಕ್ತಸಿಕ್ತ ಘಟನೆ ನಡೆದಿದೆ. ಬಿಹಾರ ಮೂಲದ ಟಿಂಕು ಶರ್ಮ (28) ಕೊಲೆಯಾದ ಹೆಡ್ ಕುಕ್. ಹೋಟೆಲ್ ಮಾಲೀಕ ಇಮ್ರಾನ್ (34) ಕೊಲೆ ಮಾಡಿದ ಆರೋಪಿ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಹೋಟೆಲ್‌ನ ಹಣಕಾಸು ವ್ಯವಹಾರ ಹಾಗೂ ಹಣ ಕದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕ ಮತ್ತು ಕುಕ್ ನಡುವೆ ತೀವ್ರ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ಇಮ್ರಾನ್, ಗೇಮ್ ಜೋನ್‌ನಲ್ಲಿದ್ದ ಸ್ನೂಕರ್ ಸ್ಟಿಕ್ (Snooker Stick) ನಿಂದ ಟಿಂಕು ಶರ್ಮ ಮೇಲೆ ಬಲವಾಗಿ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಟಿಂಕು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೊಲೆ ಮಾಡಿದ ನಂತರ ಮೃತದೇಹವನ್ನು ಯಾರಿಗೂ ತಿಳಿಯದಂತೆ ವಿಲೇವಾರಿ ಮಾಡಲು ಇಮ್ರಾನ್ ಸಂಚು ರೂಪಿಸಿದ್ದ. ಶವವನ್ನು ಕಾರಿನಲ್ಲಿ ಹಾಕಿಕೊಂಡು ಸಾಗಿಸುತ್ತಿದ್ದ ವೇಳೆ ಪೊಲೀಸರ ತಪಾಸಣೆಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸಾಗರ ಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಫೆಯಲ್ಲಿ ನಡೆದ ಗಲಾಟೆಯ ಕುರುಹುಗಳನ್ನು ಸಂಗ್ರಹಿಸಲಾಗಿದ್ದು, ಆರೋಪಿ ಇಮ್ರಾನ್‌ನನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹೋಟೆಲ್ ವ್ಯವಹಾರದ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here